ಜಾತಿ ಬೇಧವಿಲ್ಲದೇ ಗುಣಮಟ್ಟದ ಶಿಕ್ಷಣ ಮಾದರಿಯಾಗಿದೆ
KannadaprabhaNewsNetwork | Published : Nov 03 2023, 12:31 AM IST
ಜಾತಿ ಬೇಧವಿಲ್ಲದೇ ಗುಣಮಟ್ಟದ ಶಿಕ್ಷಣ ಮಾದರಿಯಾಗಿದೆ
ಸಾರಾಂಶ
ಚಿಕ್ಕನಾಯಕನಹಳ್ಳಿ ತಾಲೂಕು ಬುಕ್ಕಾಪಟ್ಟಣ ಹೋಬಳಿ ಗಾಣದಹುಣಸೆ ಗ್ರಾಮದಲ್ಲಿರುವ ಶ್ರೀಸತ್ಯಸಾಯಿ ಕಾರುಣ್ಯನಿಕೇತಂ ಗುರುಕುಲಂ ನಲ್ಲಿ ಹಮ್ಮಿಕೊಂಡಿದ್ದ ನವೆಂಬರ್ ತಿಂಗಳ ವಿಶೇಷ ಪೂಜೆ ಮತ್ತು ಹೋಮ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಮ್ಮ ಕುಟುಂಬ ಸಮೇತ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ತುಮಕೂರು ಚಿಕ್ಕನಾಯಕನಹಳ್ಳಿ ತಾಲೂಕು ಬುಕ್ಕಾಪಟ್ಟಣ ಹೋಬಳಿ ಗಾಣದಹುಣಸೆ ಗ್ರಾಮದಲ್ಲಿರುವ ಶ್ರೀಸತ್ಯಸಾಯಿ ಕಾರುಣ್ಯನಿಕೇತಂ ಗುರುಕುಲಂ ನಲ್ಲಿ ಹಮ್ಮಿಕೊಂಡಿದ್ದ ನವೆಂಬರ್ ತಿಂಗಳ ವಿಶೇಷ ಪೂಜೆ ಮತ್ತು ಹೋಮ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಮ್ಮ ಕುಟುಂಬ ಸಮೇತ ಭಾಗವಹಿಸಿದ್ದರು. ಶ್ರೀಸತ್ಯಸಾಯಿ ನಿಕೇತಂ ಗುರುಕುಲಂನಲ್ಲಿ ಪ್ರತಿ ತಿಂಗಳ ಮೊದಲು ಗುರುವಾರ ನಡೆಯುವ ವಿಶೇಷ ಪೂಜೆ ಮತ್ತು ಹೋಮ ಕಾರ್ಯಕ್ರಮದಲ್ಲಿ ತಮ್ಮ ಪತ್ನಿ ಕಲ್ಪನಾ ಮುರುಳೀಧರ್ ಅವರೊಂದಿಗೆ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಮುರುಳೀಧರ ಹಾಲಪ್ಪ, ಯಾವುದೇ ಪ್ರಚಾರವಿಲ್ಲದ ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ 6 ನೇ ತರಗತಿಯಿಂದ ಪಿಎಚ್‌ಡಿ, ಮೆಡಿಕಲ್, ಇಂಜಿನಿಯರಿಂಗ್ ವರೆಗೆ ಉಚಿತ ಶಿಕ್ಷಣ ನೀಡುತ್ತಿರುವ ಶ್ರೀಸತ್ಯಸಾಯಿ ಕಾರುಣನಿಕೇತಂ ಗುರುಕಲಂ, ಶಿಕ್ಷಣದ ಜೊತೆಗೆ, ಆರೋಗ್ಯ ಸೇವೆಯನ್ನು ಒದಗಿಸುತ್ತಾ ಬಂದಿದೆ. ಯಾರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂಬುದನ್ನು ಸ್ವತಃ ಪರಿಶೀಲಿಸಿ ಅವರಿಗೆ ಮಾತ್ರ ಗುರುಕುಲಂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜಾತಿ ಭೇಧವಿಲ್ಲದೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿರುವುದು ಮಾದರಿಯಾದ ವಿಚಾರ ಎಂದರು. ಶ್ರೀಸತ್ಯಸಾಯಿ ಕಾರುಣ್ಯನಿಕೇತಂ ಗುರುಕುಲಂನ ಅಧ್ಯಕ್ಷ ರಾಕೇಶ್ ಎಚ್.ಕೆ.ಮಾತನಾಡಿ, ಸರಕಾರ, ಸಮಾಜ ಹಾಗೂ ಸಂಸ್ಥೆ ಒಟ್ಟಿಗೆ ಸೇರಿ ಒಳ್ಳೆಯ ಸಮಾಜವನ್ನು ಕಟ್ಟುವ ಕೆಲಸವನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ. ಇಲ್ಲಿ ಮಕ್ಕಳಿಗೆ ಜೀವನವನ್ನು ಎದುರಿಸುವುದು ಹೇಗೆ ? ಎಂಬುದನ್ನು ಶಿಕ್ಷಣದ ಜೊತೆ ಜೊತೆಗೆ ಹೇಳಿಕೊಡಲಾಗುವುದು. ಮಕ್ಕಳಿಂದ ಯಾವುದೇ ಶುಲ್ಕ ಪಡೆಯದೆ ಶಿಕ್ಷಣ, ಒಳ್ಳೆಯ ಶುದ್ದ ಕುಡಿಯುವ ನೀರು ಹಾಗೂ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ. ಇಂದು ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರೆ ಅದಕ್ಕೆ ಕಾರಣವೇ ದುಬಾರಿಯಾದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು. ಹಾಗಾಗಿ ಸರಕಾರ ಈವೆರಡನ್ನು ಉಚಿತವಾಗಿ ನೀಡುವಂತಾದರೆ ಹೆಚ್ಚಿನ ಭ್ರಷ್ಟಾಚಾರವನ್ನು ಬುಡಸಮೇತ ತೊಲಗಿಸಬಹುದು ಎಂದರು. ಗುರುಕುಲಂ ನ ಮುಖ್ಯ ಶಿಕ್ಷಕ ಮಂಜುನಾಥ್ ಎಚ್.ವಿ.ಮಾತನಾಡಿ, ೨೦೧೮ರಲ್ಲಿ ಗಾಣದ ಹುಣಸೆ ಗ್ರಾಮದಲ್ಲಿ ಪ್ರಾರಂಭವಾದ ನಮ್ಮ ಗುರುಕುಲಂನಲ್ಲಿ ಮಕ್ಕಳಿಗೆ 6 ನೇ ತರಗತಿಯಿಂದ ಮೆಡಿಕಲ್, ಇಂಜಿನಿಯರಿಂಗ್, ಪಿ.ಹೆಚ್.ಡಿ. ವರೆಗೂ ಉಚಿತ ಶಿಕ್ಷಣ ನೀಡಲಾಗುತ್ತದೆ. ಎಲ್ಲಾ ರೀತಿಯಿಂದಲೂ ಈ ಮಗುವಿಗೆ ಗುರುಕುಲದ ಅವಶ್ಯಕತೆ ಇದೆ ಎಂಬುದನ್ನು ಮನಗಂಡ ನಂತರ ಮಗುವಿಗೆ ಪ್ರವೇಶ ನೀಡಲಾಗುವುದು. ವರ್ಷದಲ್ಲಿ ಕನಿಷ್ಠ 15 ದಿನ ಸಮಾಜ ಸೇವೆ ಮಾಡಬೇಕೆಂಬ ನಿಯಮವಿದೆ. ವಿದ್ಯಾಭ್ಯಾಸದ ಜೊತೆ ಜೊತೆಗೆ ಸಮಾಜ ಸೇವೆಯಲ್ಲಿ ಆಸಕ್ತಿ ಬೆಳೆಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ ಎಂದು ವಿವರಿಸಿದರು. ಈ ವೇಳೆ ಶ್ರೀಸತ್ಯಸಾಯಿ ಕಾರುಣ್ಯನಿಕೇತಂ ಗುರುಕುಲಂನ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಕಸ್ತೂರಿ, ಕಾರ್ಯದರ್ಶಿ ಅನಿಲ್ ಕುಮಾರ್, ಶಿಕ್ಷಕ ಕೆ.ವಿ.ಎಸ್.ಮೂರ್ತಿ, ಉದ್ಯಮಿಗಳಾದ ಡಾ.ರಮೇಶ್ ಬಾಬು, ಸುಧೀರ್, ಜ್ಞಾನಬುತ್ತಿ ಸತ್ಸಂಗದ ಮುರುಳೀ ಕೃಷ್ಣಪ್ಪ, ಅಯುರ್ವೇದಿಕ್ ಗುರುಗಳಾದ ಆನಂತ.ಜಿ. ನಗರ ಯೋಜನೆಯ ನಿವೃತ್ತ ಜಂಟಿ ನಿರ್ದೇಶಕ ನರಟರಾಜ ಶೆಟ್ರು, ಟೂಡಾ ಮಾಜಿ ಅಧ್ಯಕ್ಷ ಚಂದ್ರಶೇಖರ್, ಬಿಕೆಜಿ ಮೈನಿಂಗ್‌ನ ಉಪ ಪ್ರಧಾನ ವ್ಯವಸ್ಥಾಪಕ ಮಂಜುನಾಥ್, ಸಾಪ್ಟವೇರ್ ಕನ್ಸಲೆಂಟ್ ರಾಘವೇಂದ್ರ, ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ವೀಣಾ ಉಮಾಶಂಕರ್, ಅನಿತಾ ಮತ್ತಿತ್ತರರು ಉಪಸ್ಥಿತರಿದ್ದರು.