ಅಮಾನತು - ಶಾಸಕರ ಕತ್ತು ಹಿಡಿದು ಹೊರದಬ್ಬಿದ್ದು ಸರಿಯಲ್ಲ : ಬಿ.ವೈ. ವಿಜಯೇಂದ್ರ ಆಕ್ರೋಶ

| N/A | Published : Mar 22 2025, 10:38 AM IST

BY vijayendraa

ಸಾರಾಂಶ

ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿರುವ ಸಭಾಧ್ಯಕ್ಷರ ನಿರ್ಧಾರ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

 ಬೆಂಗಳೂರು : ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿರುವ ಸಭಾಧ್ಯಕ್ಷರ ನಿರ್ಧಾರ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 224 ಶಾಸಕರಿಗೆ ರಕ್ಷಣೆ ಕೊಡುವ ಸ್ಥಾನದಲ್ಲಿ ಸಭಾಧ್ಯಕ್ಷರು ಕುಳಿತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಪ್ರತಿಪಕ್ಷವಾಗಿ ನಾವು ಸಚಿವರ ಪರವಾಗಿ ಹೋರಾಟ ಮಾಡಿದರೆ ನಮ್ಮನ್ನು ಕತ್ತು ಹಿಡಿದು ಹೊರದಬ್ಬುವ ಕೆಲಸ ಮಾಡಿದ್ದು ಸರಿಯಲ್ಲ. ಮುಖ್ಯಮಂತ್ರಿಯವರು ರಕ್ಷಣೆಯ ಹೊಣೆಗಾರಿಕೆ ವಹಿಸಬೇಕಿತ್ತು, ಸಚಿವರ ರಕ್ಷಣೆಗೆ ಬರಬೇಕಿತ್ತು. ರಕ್ಷಣೆ ವಿಚಾರಕ್ಕೆ ಪ್ರತಿಭಟನೆ ಮಾಡಿದರೆ ಬಿಜೆಪಿ ಶಾಸಕರನ್ನು ಎತ್ತಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ದೇಶದ ಮುಂದೆ ಶಾಸಕರ ಗೌರವ ಹರಾಜಾಗುವಂತಾಗಿದೆ. ಅಧಿಕಾರದ ಮದ ಎಲ್ಲಿಗೆ ಬಂದಿದೆ ಎಂದರೆ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇದರ ಪರಿಣಾಮವಾಗಿ ಸಚಿವರು, ಶಾಸಕರನ್ನು ಬೀದಿಗೆ ತರುವ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿಯೇ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ಮುಸ್ಲಿಂ ಪುಡಾರಿಗಳು ಬೆಂಕಿ ಹಚ್ಚಿದ್ದರು. ಆಗ ಮುಖ್ಯಮಂತ್ರಿಯವರು ಆ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ರಕ್ಷಣೆಗೆ ಬಂದಿರಲಿಲ್ಲ. ಅದೇ ರೀತಿ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಇವರಿಗೆ ದಲಿತರ ಬಗ್ಗೆ ಕಾಳಜಿಯೇ ಇಲ್ಲ. ಕೇವಲ ಮುಸಲ್ಮಾನರ ಹಿಂದೆ ಹೊರಟ ಮುಖ್ಯಮಂತ್ರಿಗಳು ಸದನದಲ್ಲಿ ಶಾಸಕರು, ಸಚಿವರ ರಕ್ಷಣೆಗೆ ಬರುತ್ತಿಲ್ಲ. ಇಂತಹ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಮುಂದುವರಿಯಬೇಕೇ ಎಂಬುದನ್ನು ಯೋಚಿಸಬೇಕು ಎಂದು ಟೀಕಾಪ್ರಹಾರ ನಡೆಸಿದರು.

ಆಡಳಿತ ಪಕ್ಷದ ಸಚಿವರ ರಕ್ಷಣೆಗೆ ಬಾರದ ಮುಖ್ಯಮಂತ್ರಿಗಳ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ. ಅವರ ನಡೆ ಪ್ರಶ್ನಾರ್ಹವಾಗಿದೆ. ರಾಜ್ಯದ ಸಚಿವರ ಹನಿಟ್ರ್ಯಾಪ್ ಕುರಿತ ಹೇಳಿಕೆ ದೇಶವ್ಯಾಪಿ ಚರ್ಚೆಗೊಳಪಡುತ್ತಿದೆ. ನಡೆದಿರುವುದು ಸತ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಸಹ ಹೇಳಿಕೆ ಕೊಟ್ಟಿದ್ದಾರೆ. ಹನಿಟ್ರ್ಯಾಪ್ ಮಾಡಿದ ಶಾಸಕರು, ಸಚಿವರ ಹೆಸರು ಬಹಿರಂಗಪಡಿಸಲು ಮುಖ್ಯಮಂತ್ರಿಗಳು ಸೂಚಿಸಬೇಕಿತ್ತು ಎಂದರು.

ಶಾಸಕರ ಅಮಾನತು ಕಾಂಗ್ರೆಸ್‌ನ ದುರುಳ ನೀತಿ: ಆರ್‌.ಅಶೋಕ್‌ ಕಿಡಿ

ನ್ಯಾಯಕ್ಕಾಗಿ ಆಗ್ರಹಿಸಿದ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಖಂಡನೀಯ. ಇದು ಕಾಂಗ್ರೆಸ್‌ನ ದುರುಳ ನೀತಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸದನದಲ್ಲಿ ಸಹಕಾರ ಸಚಿವ ರಾಜಣ್ಣ ಹನಿಟ್ರ್ಯಾಪ್‌ ಆಗಿದೆ ಎಂದಾಗ ಸಚಿವರಿಗೆ ಮತ್ತು ಮುಖ್ಯಮಂತ್ರಿಗೆ ಅದು ಅಶ್ಲೀಲ ಎಂದು ಅನ್ನಿಸಲೇ ಇಲ್ಲ. ಸದನದ ಗೌರವ ಕಾಪಾಡಬೇಕಾಗಿರುವ ಕಾರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗಿದೆ. ಹನಿಟ್ರ್ಯಾಪ್‌ ಆಗಿರುವುದು ತಮ್ಮ ಪಕ್ಷದ ನಾಯಕರಿಂದಲೇ ಎಂದರೂ ಸರ್ಕಾರ ಸುಮ್ಮನಿದೆ ಎಂದು ಕಿಡಿಕಾರಿದರು.

ಸದನದಲ್ಲಿ ಬಿಜೆಪಿ ಶಾಸಕರು ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಮೇಲೆ ಸಭಾಧ್ಯಕ್ಷ ಯು.ಟಿ.ಖಾದರ್‌ ಗದಾ ಪ್ರಹಾರ ಮಾಡಿರುವುದು ಯಾವ ನ್ಯಾಯ? 18 ಶಾಸಕರನ್ನು ಅಮಾನತು ಮಾಡಿರುವುದು ಅನ್ಯಾಯ. ಸಭಾಧ್ಯಕ್ಷರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಕಾಂಗ್ರೆಸ್‌ನ ದುರುಳ ನೀತಿ. ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮರ್ಯಾದೆ ಹಾಳು: ಬೊಮ್ಮಾಯಿ

ನವದೆಹಲಿ: ಹನಿಟ್ರ್ಯಾಪ್ ಪ್ರಕರಣ ಇಡೀ ದೇಶದಲ್ಲಿ ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡಿದೆ. ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ. ಈ ಪ್ರಕರಣ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ನಡೆದಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.‌ ಶುಕ್ರವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಪಕ್ಷ ಆಡಳಿತವನ್ನು ನೈತಿಕ ಅಧಪತನಕ್ಕೆ ತೆಗೆದುಕೊಂಡು ಹೋಗಿದೆ. ಎರಡು ವರ್ಷದಲ್ಲಿ ಹತ್ತು ಹಗರಣ ನಡೆದಿವೆ. ಇದುವರೆಗೂ ರಾಜ್ಯದಲ್ಲಿ ಮನಿ ಕ್ರೈಸಿಸ್ ಇತ್ತು‌. ಈಗ ಹನಿ ಕ್ರೈಸಿಸ್ ಶುರುವಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.