ಸಾರಾಂಶ
‘ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇಂಥವರು ಹಿಂದೂಗಳೇ ಅಲ್ಲ’ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ‘ಹಿಂದುಗಳೆಂದು ತಮ್ಮನ್ನು ಕರೆದುಕೊಳ್ಳುವವರು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇಂಥವರು ಹಿಂದೂಗಳೇ ಅಲ್ಲ’ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಹುಲ್‌ರ ಈ ಹೇಳಿಕೆ ರಾಹುಲ್ ಹಾಗೂ ಮೋದಿ ನಡುವೆ ಲೋಕಸಭೆಯಲ್ಲಿ ಅಪರೂಪದ ನೇರಾನೇರ ವಾಕ್ಸಮರಕ್ಕೆ ನಾಂದಿ ಹಾಡಿದೆ.ರಾಹುಲ್ ಮಾತಿಗೆ ಪ್ರಧಾನಿ ನರೇಂದ್ರ ಮೋದಿ 2 ಬಾರಿ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ‘ಇಡೀ ಹಿಂದು ಸಮಾಜವನ್ನು ಹಿಂಸಾಚಾರಿ ಎಂದು ಕರೆಯುವುದು ಗಂಭೀರ ವಿಚಾರ. ಅದು ತಪ್ಪು’ (ಹಿಂದೂ ಸಮಾಜ್ ಕೋ ಹಿನ್ಸಕ್ ಕೆಹನಾ ಗಲತ್ ಹೈ) ಎಂದು ಮೊದಲ ಬಾರಿ ಮೋದಿ ಹೇಳಿದರು. ಇನ್ನೊಮ್ಮೆ ಎದ್ದುನಿಂತು, ‘ಸಂವಿಧಾನ ನಮಗೆ ವಿಪಕ್ಷ ನಾಯಕನ ಸ್ಥಾನವನ್ನು ಗೌರವಿಸುವುದನ್ನು ಕಲಿಸಿದೆ’ ಎಂದು ಹೇಳಿದರು.
ಇದೇ ವೇಳೆ, ಹಿಂದುತ್ವವನ್ನು ಹಿಂಸಾಚಾರಿಗಳಿಗೆ ಹೋಲಿಸಿದ್ದು ತಪ್ಪು ಎಂದು ಆರ್‌ಎಸ್‌ಎಸ್ ಮುಖಂಡ ಸುನಿಲ್ ಅಂಬೇಕರ್ ಕಿಡಿಕಾರಿದ್ದಾರೆ.
ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ: ಇದೇ ವೇಳೆ ರಾಹುಲ್ ಮಾತಿಗೆ ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸಂಸದರು, ರಾಹುಲ್ ಗಾಂಧಿ ಹಿಂದೂಗಳನ್ನು ಅವಮಾನಿಸಿದ್ದಕ್ಕೆ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದರು. ಲೋಕಸಭೆಯ ಹೊರಗೂ ಪ್ರತಿಭಟನೆ ನಡೆಸಿದರು.ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಹೇರಿದ್ದ ತುರ್ತುಸ್ಥಿತಿ ಹಾಗೂ 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ಮಾತನಾಡಿ, ‘ರಾಹುಲ್ ಗಾಂಧಿಗೆ ಅಹಿಂಸೆಯ ಬಗ್ಗೆ ಮಾತನಾಡುವ ಹಕ್ಕೇ ಇಲ್ಲ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ’ ಎಂದು ಕಿಡಿಕಾರಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ರಾಹುಲ್ ಗಾಂಧಿ ಹಿಂದೂಗಳ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಶಿವ ಸೇರಿದಂತೆ ವಿವಿಧ ದೇವರ ಭಿತ್ತಿಚಿತ್ರಗಳನ್ನು ಪ್ರದರ್ಶಿಸುವುದು ನಿಯಮಕ್ಕೆ ವಿರುದ್ಧವಾದುದು ಎಂದು ರಾಹುಲ್ ಗಾಂಧಿ ಅವರಿಗೆ ಸೂಚಿಸಿದರು.
ಯೋಗಿ ಖಂಡನೆ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿ, ‘ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾದ ನಂತರ ಪ್ರಬುದ್ಧರಾಗುತ್ತಾರೆ ಎಂದು ನಾವು ಭಾವಿಸಿದ್ದವು. ಆದರೆ ಅಪಕ್ವ ಮನಸ್ಸಿನ ವ್ಯಕ್ತಿ ಮಾತ್ರ ಹಿಂದೂಗಳ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಾನೆ. ನನಗೆ ವಿಷಾದವಾಗುತ್ತಿದೆ. ಹಿಂದೂ ಭಾರತದ ಮೂಲ ಸಮಾಜ ಮತ್ತು ಈ ದೇಶದ ಆತ್ಮ’ ಎಂದಿದ್ದಾರೆ.
ಪ್ರಿಯಾಂಕಾ ತಿರುಗೇಟು:
ರಾಹುಲ್ ಸೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿ, ‘ರಾಹುಲ್ ಎಂದೂ ಹಿಂದುಗಳನ್ನು ನಿಂದಿಸಲಾರ. ಅದು ಬಿಜೆಪಿ ಹಾಗೂ ಅದರ ನಾಯಕರ ಬಗ್ಗೆ ಆಡಿದ ಮಾತಾಗಿತ್ತು. ಇದನ್ನು ರಾಹುಲ್ ಖುದ್ದಾಗಿ ಹೇಳಿದ್ದಾರೆ’ ಎಂದು ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.