ಸಾರಾಂಶ
‘ಒಂದು ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿಯವರು ವಾಪಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾ ಪ್ರಧಾನಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ. ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ - ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ
ಮಂಗಳೂರು : ‘ಒಂದು ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿಯವರು ವಾಪಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾ ಪ್ರಧಾನಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ. ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೇರುವ ಬಿಜೆಪಿ ಕನಸು ಈಡೇರದು. ಗೆಹ್ಲೋಟ್ ಅವರಂತಹ ಕುತಂತ್ರಿ ದೇಶದಲ್ಲಿ ಬೇರೆ ಯಾರೂ ಇಲ್ಲ ಎಂದು ಆರೋಪಿಸಿದರು. ರಾಷ್ಟ್ರಪತಿಯವರು ತಕ್ಷಣವೇ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಮಧ್ಯೆ, ಡಿಸೋಜ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಸಂಜೆ ಮನವಿ ಸಲ್ಲಿಸಿದೆ.