ಸಾರಾಂಶ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅತ್ಯಾಚಾರ, ಸುಲಿಗೆ, ಕೊಲೆ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಎಲ್ಲಾ ಜೈಲುಗಳು ರೆಸಾರ್ಟ್ ಆಗಿವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಮಂಡ್ಯ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅತ್ಯಾಚಾರ, ಸುಲಿಗೆ, ಕೊಲೆ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಎಲ್ಲಾ ಜೈಲುಗಳು ರೆಸಾರ್ಟ್ ಆಗಿವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ದಿಶಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲ್‌ನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಬಗ್ಗೆ ಉತ್ತರಿಸಿದ ಅವರು, ಜೈಲುಗಳು ಸೆರೆಮನೆ ಆಗಬೇಕಿತ್ತು. ಆದರೆ, ಈಗ ಅವು ಅರಮನೆ ಆಗಿದೆ. ನಾವೇನು ಮಾಡೋಕೆ ಆಗುತ್ತದೆ ಎಂದರು.
ಪರಪ್ಪನ ಅಗ್ರಹಾರ ಜೈಲಿನ ಸೂಪರ್ಡೆಂಟ್ ತುಂಬಾ ಭ್ರಷ್ಟಾಚಾರಿಯಾಗಿದ್ದು ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಈಗ ಹೊಸ ಮನೆ ಕಟ್ಟುತ್ತಿದ್ದಾರಂತೆ. ಅದರ ಖರ್ಚು ವೆಚ್ಚ ಇಲ್ಲಿ ಇರುವವರೇ ನೋಡಿಕೊಳ್ತಿದ್ದಾರೆ ಅಂತ ಯಾರೋ ಫೋನ್ ಮಾಡಿ ತಿಳಿಸಿದ್ದಾರೆ. ಅದಕ್ಕೆ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದೆ ಅನ್ನೋ ಮಾತಿದೆ ಎಂದರು.
ಈ ಬಗ್ಗೆ ಕೂಡಲೇ ಗೃಹ ಸಚಿವರು ಪರಿಶೀಲಿಸಬೇಕು. ಸಿಎಂ ಸಿದ್ದರಾಮಯ್ಯ ತಪ್ಪಿತಸ್ಥರನ್ನು ಅಮಾನತ್ತು ಮಾಡಿ ಈ ಬಗ್ಗೆ ತನಿಖೆ ನಡೆಸಬೇಕು. ಸೂಪರ್ಡೆಂಟ್ ಹೊಸ ಮನೆಗೆ ಜೆಲ್ಲಿ, ಮರಳು, ಸೀಮೆಂಟ್ ಅಲ್ಲಿಂದ ಸಪ್ಲೈ ಆಗುತ್ತಿದೆ ಅಂತ ತಿಳಿಯಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತಿದ್ದೇನೆ. ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಹಾಳಾಗಿದೆ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಲೂಟಿ ಮಾಡಿರೋದನ್ನು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದರ ಬಗ್ಗೆ ಸಚಿವರಾಗಲಿ, ಸರ್ಕಾರವಾಗಲಿ ತಲೆ ಕೆಡಿಸಿಕೊಂಡಿಲ್ಲ ಎಂದರು.
ಅಧಿಕಾರಿಗಳ ಮೇಲೆ ಕಂಟ್ರೋಲ್ ಇಲ್ಲ. ಅಧಿಕಾರಿ ಬಳಿ ಶುದ್ಧವಾಗಿಲ್ಲ ಅಂದ್ರೆ ಸ್ನೇಹಿತನಿಗಿಂತ ಹೆಚ್ಚಿಗೆ ನಮ್ಮ ಬಳಿ ನಡೆದುಕೊಳ್ಳುತ್ತಾನೆ. ಯಾದಗಿರಿಯಲ್ಲಿ 30 ಲಕ್ಷ ಕೊಟ್ಟಿದ್ದ ಪರುಶುರಾಮ್‌ನ 7 ತಿಂಗಳಲ್ಲೇ ವರ್ಗಾವಣೆ ಮಾಡಿದರು. ಬರೀ ಏಳು ತಿಂಗಳಿಗೆ 30 ಲಕ್ಷ ಕೊಟ್ಟರೆ ಅವನು ಹೋಗಿ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಗೃಹ ಸಚಿವರು ಎರಡೂ ವರ್ಷ ಅವರನ್ನು ಮುಟ್ಟಬಾರದು ಅಂತ ಹೇಳುತ್ತಾರೆ. ಆ ಶಾಸಕನ ಮೇಲೆ ಜಾತಿ ನಿಂದನೆ, ಭ್ರಷ್ಟಾಚಾರದ ಕೇಸ್ ಸಹ ಇದೆ. ಮೊದಲನೇ ದಿನ ಆತ ನಾಪತ್ತೆ ಆಗಿದ್ದರು. ಈಗ ಪೊಲೀಸರೇ ಅವರಿಗೆ ರಕ್ಷಣೆ ಕೊಟ್ಟು ಮನೆಯಲ್ಲಿರಿಸಿದ್ದಾರೆ. ಇದುವರೆಗೂ ಶಾಸಕರನ್ನು ಏಕೆ ಬಂಧಿಸಿಲ್ಲ. ಸರ್ಕಾರ ರಕ್ಷಣೆ ಇದೆ ಎಂದು ದೂರಿದರು.