ಸಾರಾಂಶ
ಪ್ರಧಾನಿ ಮೋದಿ ಭಾರತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ಅರಿಯಬಹುದಾಗಿದೆ. ಆರ್.ಎಸ್.ಎಸ್ ಆಶಯದಂತೆ ನವ ಮನುವಾದ ನಿರ್ಮಾಣ ಇವರ ಗುರಿಯಾಗಿದೆಯೇ ಹೊರತು ಸಂವಿಧಾನ ಆಶಯ ಜಾರಿಯಲ್ಲ.
ಮೈಸೂರು : ಈ ಬಾರಿಯ ಲೋಕಸಭಾ ಚುಣಾವಣೆ ಹಿನ್ನೆಲೆಯಲ್ಲಿ ಜನಾಂದೋಲನಗಳ ಮಹಾಮೈತ್ರಿ, ಜನತಂತ್ರ ಪ್ರಯೋಗಶಾಲೆ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೊರ ತಂದಿರುವ ಮೋದಿ ಆಳ್ವಿಕೆ ವಿರುದ್ಧದ ಜನತಾ ಆರೋಪಗಳ ಪಟ್ಟಿಯ ಕಿರುಹೊತ್ತಿಗೆಯನ್ನು ಪತ್ರಕರ್ತರ ಭವನದಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಜನಾಂದೋಲನಗಳ ಮಹಾಮೈತ್ರಿಯ ಸಂಘಟನಾ ಕಾರ್ಯದರ್ಶಿ ಉಗ್ರ ನರಸಿಂಹೇಗೌಡ ಮಾತನಾಡಿ, ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಭರವಸೆ, ಹೇಳಿಕೆಗಳನ್ನು ಈ ಕಿರು ಹೊತ್ತಿಗೆ ಒಳಗೊಂಡಿದೆ. ಜೊತೆಗೆ ಅವನ್ನು ಏಕೆ ಈಡೇರಿಸಲಿಲ್ಲ ಎಂಬುದನ್ನು ಸಹ ವಿವರಿಸಲಾಗಿದೆ ಎಂದರು.
ಕರಾಳ ಕೃಷಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ, ಕಾರ್ಮಿಕರ ಹಕ್ಕು ನಿರಾಕರಿಸುವಂತೆ 4 ಸಂಹಿತೆಗಳನ್ನಾಗಿ ಮಾಡಿದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿಯಂತಹ ಜನ, ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ವಿವರಿಸಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಸನಾತನ ಧರ್ಮ ರಕ್ಷಣೆಯೇ ಮೋದಿ ಗ್ಯಾರಂಟಿ ಎಂದಿದ್ದಾರೆ. ಅಂದರೆ ವರ್ಣಾಶ್ರಮ ಇವರ ಗುರಿಯೇ, ಈ ಹೇಳಿಕೆಯಿಂದಾಗಿ ಇವರು ಭಾರತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ಅರಿಯಬಹುದಾಗಿದೆ. ಆರ್.ಎಸ್.ಎಸ್ ಆಶಯದಂತೆ ನವ ಮನುವಾದ ನಿರ್ಮಾಣ ಇವರ ಗುರಿಯಾಗಿದೆಯೇ ಹೊರತು ಸಂವಿಧಾನ ಆಶಯ ಜಾರಿಯಲ್ಲ ಎಂದು ಅವರು ಆರೋಪಿಸಿದರು.
ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜು ಮಾತನಾಡಿ, ಸುಮಾರು 23 ಆರೋಪಗಳನ್ನು ಈ ಕಿರುಹೊತ್ತಿಗೆ ಒಳಗೊಂಡಿದೆ. ಇವು ಕೇವಲ ಆರೋಪಗಳಲ್ಲ, ಇವುಗಳ ಹಿಂದೆ ಅಂಕಿ ಅಂಶಗಳಿವೆ. ನಮ್ಮ ಆರ್ಥಿಕ ಪರಿಸ್ಥಿತಿ ಎಷ್ಟು ದುರ್ಬಲವಾಗಿದೆ, ನ್ಯಾಯಾಂಗದ ಮೇಲೆ ಹೇಗೆ ಪ್ರಭಾವ ಬೀರಲಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಹೇಗೆ ಆಡಳಿತ ಹೋಗುತ್ತಿದೆ ಮೊದಲಾದವನ್ನು ವಿಚಾರಗಳನ್ನು ವಿವರಿಸಲಾಗಿದೆ ಎಂದರು.
ಪ್ರಗತಿಪರ ಚಿಂತಕ ಪ್ರೊ.ಕೆ. ಕಾಳಚನ್ನೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸಕೋಟೆ ಬಸವರಾಜು ಮೊದಲಾದವರು ಇದ್ದರು.