‘ನಗರ ಸಾರಿಗೆ, ಕಸ ವಿಲೇವಾರಿ, ನಗರಾಭಿವೃದ್ಧಿ ಮೂಲಸೌಕರ್ಯ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಜಪಾನಿನ ಉತ್ತಮ ವ್ಯವಸ್ಥೆಗಳನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳುತ್ತೇವೆ.

ಬೆಂಗಳೂರು : ‘ನಗರ ಸಾರಿಗೆ, ಕಸ ವಿಲೇವಾರಿ, ನಗರಾಭಿವೃದ್ಧಿ ಮೂಲಸೌಕರ್ಯ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಜಪಾನಿನ ಉತ್ತಮ ವ್ಯವಸ್ಥೆಗಳನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳುತ್ತೇವೆ. ಹೂಡಿಕೆ ಸೆಳೆಯುವ ಜೊತೆಗೆ “ಬಿಯಾಂಡ್‌ ಬೆಂಗಳೂರು” ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಶನಿವಾರ ವಿಧಾನಸೌಧ ಸಮ್ಮೇಳನ ಸಭಾಂಗಣ ʻಸಂಗಮʼದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಾರೋಹಳ್ಳಿಯಲ್ಲಿ 600 ಜನರಿಗೆ ಉದ್ಯೋಗ ಸೃಷ್ಟಿಗೆ ಕವಾಸಕಿಯೊಂದಿಗೆ ಒಪ್ಪಂದ, ರಾಜ್ಯದಲ್ಲಿ ಟೊಯೋಟಾ ಘಟಕ ವಿಸ್ತರಣೆ ಕುರಿತ ಚರ್ಚೆ ಹಾಗೂ ಹೈಬ್ರಿಡ್ ಟ್ಯಾಕ್ಸಿ ಕಾರು ಉತ್ಪಾದನೆಗೆ ಆಹ್ವಾನ ನೀಡುವುದು ಸೇರಿ ತಮ್ಮ ಮೂರು ದಿನಗಳ ಜಪಾನ್ ಪ್ರವಾಸದ ವಿವರಗಳನ್ನು ಶನಿವಾರ ಹಂಚಿಕೊಂಡರು.

ಈ ವೇಳೆ ನಗರಾಭಿವೃದ್ಧಿ, ಉತ್ಪಾದನಾ ಕ್ಷೇತ್ರ, ನಗರ ಸಾರಿಗೆ ವ್ಯವಸ್ಥೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜಪಾನ್ ದೇಶದಿಂದ ಕಲಿಯುವಂಥದ್ದು ಬಹಳಷ್ಟಿದೆ. ಆ ದೇಶದ ಸಮಯ ಪರಿಪಾಲನೆ, ಶಿಸ್ತು, ಬದ್ಧತೆ ಅನುಕರಣೀಯವಾಗಿದೆ. ಹೀಗಾಗಿ ಕಾರ್ಯಸಾಧುವಾದ ಯೋಜನೆಗಳ ಅನುಷ್ಠಾನ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಜಪಾನಿನ ವಿದೇಶಾಂಗ ಸಚಿವರು, ರಾಯಭಾರಿಗಳೊಂದಿಗೂ ಚರ್ಚಿಸಿದ್ದು, ಎಲ್ಲರೂ ಸಹಕರಿಸುವ ಭರವಸೆ ನೀಡಿದ್ದಾರೆ ಎಂದರು.

ಹೊಸ ಗ್ರೀನ್ ಫೀಲ್ಡ್ ಯೋಜನೆಗಳಿಗೆ ಒತ್ತು:

ಮೂರು ದಿನಗಳ ಭೇಟಿ ವೇಳೆ ನಗರಾಭಿವೃದ್ಧಿಗೆ ಸಂಬಂಧಿಸಿ ಜಪಾನಿನಲ್ಲಿ ಹಲವು ನಿಯೋಗಗಳ ಜತೆ ಮಾತುಕತೆ ನಡೆಸಿದ್ದೇವೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರಿನಾಚೆಗೂ ಹೊಸ ಗ್ರೀನ್ ಫೀಲ್ಡ್ ಯೋಜನೆ ಪ್ರಾರಂಭಿಸಬೇಕು ಎಂಬುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಮುಂದಿನ ಏಪ್ರಿಲ್‌ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವಂತೆ ಕಂಪನಿಗಳಿಗೆ ಮನವಿ ಮಾಡಿದ್ದೇವೆ ಎಂದು ಶಿವಕುಮಾರ್‌ ತಿಳಿಸಿದರು.

ಬೆಂಗಳೂರಿನಾಚೆಗೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ:

ಜಪಾನಿನಲ್ಲಿ ತ್ಯಾಜ್ಯ ವಿಲೇವಾರಿ ಮೂಲಕ ಕನಿಷ್ಠ 24 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕಕ್ಕೆ ಭೇಟಿ ನೀಡಿದ್ದು, ಕರ್ನಾಟಕದಲ್ಲೂ ಅಂಥ ಯೋಜನೆ ಅನುಷ್ಠಾನ ಕುರಿತು ಪರಿಶೀಲನೆ ನಡೆಸಲು ಆಹ್ವಾನ ನೀಡಿದ್ದೇನೆ. ಬೆಂಗಳೂರು ಮಾತ್ರವಲ್ಲದೆ, ಹುಬ್ಬಳ್ಳಿ ಧಾರವಾಡ, ಮೈಸೂರಿನಂಥ ನಗರಗಳಲ್ಲೂ ಇಂತಹ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಜಾರಿಗೊಳಿಸಬಹುದು. ಕೇಂದ್ರ ಸರ್ಕಾರ ಸಹ ಈ ನಿಟ್ಟಿನಲ್ಲಿ ನೆರವು ಒದಗಿಸಲಿದೆ ಎಂದು ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಜಪಾನಿನ ಮೆಟ್ರೋ ನಿಲ್ದಾಣಗಳು ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣಕ್ಕಿಂತ ಚೆನ್ನಾಗಿವೆ. ಸಮಯ ಪರಿಪಾಲನೆ, ಸ್ವಚ್ಛತೆಗೆ ಮಾದರಿ. ನಮ್ಮಲ್ಲೂ ಮೆಟ್ರೋ ನಿಲ್ದಾಣಗಳ ಗರಿಷ್ಠ ಉಪಯೋಗ ಪಡೆದುಕೊಳ್ಳಲು ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಕುರಿತು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.

ಟೊಯೋಟಾ ಘಟಕ ವಿಸ್ತರಣೆಗೆ ಒಲವು:

ಪ್ರಸ್ತುತ ಜಪಾನಿನ 525 ಉದ್ದಿಮೆ ಸಂಸ್ಥೆಗಳು ಕರ್ನಾಟಕದಲ್ಲಿವೆ. ಹಲವು ಉತ್ಪಾದನಾ ಘಟಕಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಹೊಸ ಹೂಡಿಕೆಗಳ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು ನಮ್ಮ ಉದ್ದೇಶ. ಟೊಯೋಟಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಪ್ರಸ್ತುತವಿರುವ ಉತ್ಪಾದನಾ ಘಟಕ ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಹೈಬ್ರಿಡ್ ಮಾದರಿ ಕಾರು ಉತ್ಪಾದನೆಗೆ ಆಹ್ವಾನ:

ಟೋಕಿಯೋ ಒಲಿಂಪಿಕ್ಸ್‌ ಸಮಯದಲ್ಲಿ ಟ್ಯಾಕ್ಸಿ ಮಾದರಿಯ ಹೈಬ್ರಿಡ್ ಕಾರು ಬಿಡುಗಡೆ ಮಾಡಲಾಗಿತ್ತು. ಇದೇ ಮಾದರಿಯ ಕಾರನ್ನು ನಮ್ಮ ರಾಜ್ಯದಲ್ಲಿ ಉತ್ಪಾದಿಸಲು ಆಹ್ವಾನ ನೀಡಿದ್ದೇವೆ. ಇದು ಸ್ಥಳೀಯ ಆಟೋಗಳಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಆಟೋಗಳಿಗೂ ನಾವು ಉತ್ತೇಜನ ನೀಡಬೇಕಾಗುತ್ತದೆ. ನಾವು ನೋಡಿದ ಟ್ಯಾಕ್ಸಿ ಕಾರು ಹೆಚ್ಚು ಅನುಕೂಲಕರವಾಗಿತ್ತು ಎಂದು ಶಿವಕುಮಾರ್‌ ಹೇಳಿದರು.

ನಯೋಗ ನಗರದಲ್ಲಿ ವಾಣಿಜ್ಯ, ಸಾರ್ವಜನಿಕ ಸಂಚಾರ ಮೂಲಸೌಕರ್ಯ ಪರಿಶೀಲಿಸಿದ್ದೇವೆ. ನ.24ರಂದು ಒಸಾಕೋಗೆ ಭೇಟಿ ನೀಡಿ ತ್ಯಾಜ್ಯದಿಂದ ಇಂಧನ ಉತ್ಪಾದನೆ ಪರಿಶೀಲಿಸಿದ್ದೇವೆ. ಪ್ಯಾನಸೋನಿಕ್, ಜೆಎಫ್‌ಸಿ ಸ್ಟೀಲ್ ಸಂಸ್ಥೆಯೊಂದಿಗೂ ಚರ್ಚೆ ಮಾಡಿ ಒಪ್ಪಂದ ಮಾಡಿಕೊಂಡಿದ್ದೇವೆ. ಸುಮೊಟೋ, ಅಜಿನಮೋಟೋ, ಅಕೆಡಾ, ಶೇಕ್ ಫಾರ್ಮಾ, ಯೊಕಸಾವಾ ಸಂಸ್ಥೆಗಳೊಂದಿಗೆ ಎಂ.ಬಿ.ಪಾಟೀಲ್ ಸಭೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

1. ತ್ಯಾಜ್ಯ ವಿಲೇವಾರಿ ಮೂಲಕ ಜಪಾನ್‌ನಲ್ಲಿ ವಿದ್ಯುತ್‌ ಉತ್ಪಾದನೆ. ಬೆಂಗಳೂರು, ಹು-ಧಾ, ಮೈಸೂರಿನಂತಹ ನಗರಗಳಲ್ಲೂ ಅದನ್ನು ಜಾರಿ ಮಾಡಬಹುದು

2. ಜಪಾನ್‌ನ ಮೆಟ್ರೋ ನಿಲ್ದಾಣಗಳು ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಾಗಿವೆ. ಏರ್‌ಪೋರ್ಟ್‌ಗಿಂತ ಚೆನ್ನಾಗಿವೆ. ನಮ್ಮಲ್ಲೂ ಆ ರೀತಿ ಯೋಜನೆ ಜಾರಿ

3. ಒಲಿಂಪಿಕ್ಸ್‌ ವೇಳೆ ಜಪಾನ್‌ನಲ್ಲಿ ಟ್ಯಾಕ್ಸಿ ಮಾದರಿ ಹೈಬ್ರಿಡ್‌ ಕಾರು ಬಿಡುಗಡೆ ಮಾಡಲಾಗಿತ್ತು. ಅದೇ ಕಾರನ್ನು ರಾಜ್ಯದಲ್ಲಿ ಉತ್ಪಾದಿಸಲು ಜಪಾನ್‌ಗೆ ಆಹ್ವಾನ