ಸಾರಾಂಶ
ಕನ್ನಡಪ್ರಭ ವಾರ್ತೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೆಡಿಎಸ್ ಪಕ್ಷದ ಶಾಸಕರಿಗೆ ಆಮಿಷ ಒಡ್ಡಿ ಸೆಳೆಯುವ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಪಾದಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ಮುಖ್ಯಮಂತ್ರಿಗಳು ಮಾತಾಡಿದ್ದಾರೆ. ಮಾತನಾಡುವವರು ಏನೇನು ಮಾಡಿದ್ದಾರೆ ಎನ್ನುವುದನ್ನು ನೋಡಿಕೊಂಡು ಬಂದಿದ್ದೇನೆ.
ಜೆಡಿಎಸ್ ಮುಗಿಸಬೇಕು ಎನ್ನುವುದೇ ಅವರ ಅಜೆಂಡಾ. ಆ ಇಬ್ಬರು ನಾಯಕರ (ಸಿದ್ದು, ಡಿಕೆಶಿ) ಅಜೆಂಡಾ ಇದೆ ಆಗಿದೆ. ಈಗಲೂ ಸಹ ಅವರಿವರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಮ್ಮ ಪಕ್ಷವನ್ನು ಮುಗಿಸುವುದೇ ಅವರ ಉದ್ದೇಶವಾಗಿದೆ ಎಂದರು.
ಕ್ಷೇತ್ರದ ಕೆಲಸಕ್ಕೆ ಹೋದರೆ ನಮ್ಮ ಶಾಸಕರನ್ನು ಕೂರಿಸಿಕೊಂಡು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬನ್ನಿ. ಏನು ಬೇಕೋ ಅದನ್ನು ಮಾಡಿಕೊಡುತ್ತೇವೆ ಎನ್ನುತ್ತಿದ್ದಾರೆ. ಎಷ್ಟು ಕೋಟಿ ಬೇಕೋ ಅಷ್ಟು ಕೊಡುತ್ತೇವೆ. ಪಕ್ಷಕ್ಕೆ ಬನ್ನಿ ಎನ್ನುತ್ತಾರೆ. ಯಾವ ಕಾರಣಕ್ಕೆ ಇದನ್ನು ಮಾಡುತ್ತೀರಿ. ವಿರೋಧ ಪಕ್ಷ ಉಳಿಸೋಕೆ ಮಾಡುತ್ತಿರುವುದಾ? ಜೆಡಿಎಸ್ ಮುಗಿಸಬೇಕು ಎಂತಲೇ ಇವರು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಈಗ ರಾಜ್ಯದಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ಅಕ್ರಮಗಳಿಂದ ಜನರೇ ಅವರನ್ನು ಸಮಾಪ್ತಿ ಮಾಡುತ್ತಾರೆ ಅಂತ ದೇವೇಗೌಡರು ಹೇಳಿದ್ದಾರೆ ಅಷ್ಟೆ. ಶಿವಕುಮಾರ್ ಅವರು ಕಾಂಗ್ರೆಸ್ 135 ವರ್ಷದ ಪಕ್ಷ ಎನ್ನುತ್ತಾರೆ. ಗಾಂಧೀಜಿ ಇದ್ದಾಗ ಇತಿಹಾಸ ಬೇರೆ. ಈಗ ಇವರ ಇತಿಹಾಸ ಏನು? ಸ್ವಾತಂತ್ರ್ಯ ತರುವಾಗ ಇತಿಹಾಸ ಬೇರೆ ಇತ್ತು. ಮನೆ ಆಸ್ತಿ ಮಾರಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರೆ. ಇವರು ಮಾಡುತ್ತಿರೋದು ಏನು? ಈಸ್ಟ್ ಇಂಡಿಯಾ ಕಂಪನಿ ಮಾಡಿದ ದರೋಡೆಯನ್ನೇ ಇವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.