ಸಾರಾಂಶ
ಚಿಕ್ಕಬಳ್ಳಾಪುರ : ಜೆಡಿಎಸ್ ನಂಬಿ ಕಾಂಗ್ರೆಸ್ ಕೆಟ್ಟಿತ್ತು, ಆದರೆ ಈಗ ಜೆಡಿಎಸ್ ನಂಬಿ ಬಿಜೆಪಿ ಕೆಡಲಿದೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೋಯ್ಲಿ ಭವಿಷ್ಯ ನುಡಿದರು.
ಸೋಮವಾರ ನಗರದ ಉತ್ತರ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಅಭ್ಯರ್ಥಿ ರಕ್ಷಾರಾಮಯ್ಯ ಜತೆ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದರು.
ರಕ್ಷಾರಾಮಯ್ಯಗೆ ಬೆಂಬಲ
ಲೋಕಸಭಾ ಟಿಕೆಟ್‌ಗಾಗಿ ತಾವು ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಆದರೆ ಹೈಕಮಾಂಡ್ ರಕ್ಷಾರಾಮಯ್ಯ ಅವರಿಗೆ ಟಿಕೆಟ್ ಕೊಟ್ಟಿದೆ. ಆದರೆ ಈಗ ನನ್ನ ಸಂಪೂರ್ಣ ಬೆಂಬಲ ರಕ್ಷಾರಾಮಯ್ಯ ಅವರಿಗೆ ನೀಡುತ್ತೇನೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದು ಅಭ್ಯರ್ಥಿಗೆ ಸಾಕಷ್ಟು ದೊಡ್ಡ ಶಕ್ತಿಯಾಗಿದೆ. ನಾನು ಸ್ಪರ್ಧಿಸುವಾಗ ಇಷ್ಟೊಂದು ಬೆಂಬಲ ಇರಲಿಲ್ಲ. ಆದರೆ ರಕ್ಷಾರಾಮಯ್ಯ ಅವರಿಗೆ ಆನೆ ಬಲ ಇದೆ ಎಂದರು.
ಮೊಯ್ಲಿ ಚುನಾವಣಾ ನಿವೃತ್ತಿ
ಇದೇ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ಅವರು ತಾವು ಇನ್ನು ಮುಂದೆ ವುದೇ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ ರಕ್ಷಾರಾಮಯ್ಯ ಪರವಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದರು.
ನನಗೆ ಲೋಕಸಭಾ ಅಭ್ಯರ್ಥಿ ಸ್ಥಾನದಿಂದ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ ಯಾಕೆಂದರೆ ಸಂಸದರ ಸ್ಥಾನ ಯಾರು ಬಿಡಲ್ಲಾ ಆದರೆ ಹೈಕಮಾಂಡ್ ತೀರ್ಮಾನದಂತೆ ನೂರಕ್ಕೆ ನೂರಷ್ಟು ಬೆಂಬಲ ಸೂಚಿಸಲಿದ್ದೇನೆ. ನಾನು ಸಾಯುವವರೆಗೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲಾ ಎಂದು ಟೀಕಿಸಿದರು.
ಮೋದಿ ಈವೆಂಟ್ ಮ್ಯಾನೇಜರ್
ಎಲ್‌ಕೆ ಅಡ್ವಾಣಿ ಪ್ರಧಾನಿ ಯಾಗಬೇಕಿತ್ತು ಆದರೆ ಆಗಲಿಲ್ಲಾ. ಆ ಸಮಯದಲ್ಲಿ ಮೋದಿ ಒಬ್ಬ ಈವೆಂಟ್ ಮ್ಯಾನೇಜರ್ ಎಂದು ಹೇಳಿದರು. ಆದರೆ ಮೋದಿ ಇಂದಿಗೂ ಸಹಾ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಪುಲ್ವಾಮಾ ದಾಳಿ ನಡೆಸುತ್ತಾರೆ. ಇನ್ನೂ ಚುನಾವಣೆ ಒಳಗೆ ಮತ್ತೆ ಏನಾದ್ರು ಮಾಡುತ್ತಾರೆ. ಕಾಯ್ತಾ ಇರೀ ಎಂದು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ,ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಜಿಲ್ಲಾಕಾರ್ಯದರ್ಶಿ ಶ್ರೀನಿವಾಸ್ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ಮತ್ತಿತರರು ಇದ್ದರು.