ಕಾಂಗ್ರೆಸ್‌ ಸೋಲಿಸಲು ಬಿಜೆಪಿ, ಜೆಡಿಎಸ್‌ ಮೈತ್ರಿಪಕ್ಷಗಳ ಸಂಕಲ್ಪ

| Published : Mar 30 2024, 12:47 AM IST / Updated: Mar 30 2024, 07:48 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ವೇಗಕ್ಕೆ ಕಡಿವಾಣ ಹಾಕಲು ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ದಾಖಲೆಯ ಫಲಿತಾಂಶ ಪಡೆಯಲು ಕಾಂಗ್ರೆಸ್‌ ಪಕ್ಷವನ್ನು ಶತಾಯಗತಾಯ ಸೋಲಿಸುವ ಸಂಕಲ್ಪ ತೊಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ವೇಗಕ್ಕೆ ಕಡಿವಾಣ ಹಾಕಲು ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ದಾಖಲೆಯ ಫಲಿತಾಂಶ ಪಡೆಯಲು ಕಾಂಗ್ರೆಸ್‌ ಪಕ್ಷವನ್ನು ಶತಾಯಗತಾಯ ಸೋಲಿಸುವ ಸಂಕಲ್ಪ ತೊಟ್ಟಿದೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಮೊದಲ ಸಮನ್ವಯ ಸಭೆಯಲ್ಲಿ ಉಭಯ ಪಕ್ಷಗಳ ಹಿರಿಯ ನಾಯಕರು ಒಂದೇ ವೇದಿಕೆಯಲ್ಲಿ ನಿಂತು ಒಟ್ಟಾಗಿ ಕೈಮೇಲೆತ್ತುವ ಮೂಲಕ ನಾವೆಲ್ಲ ಒಂದೇ ಎಂಬ ಒಗ್ಗಟ್ಟಿನ ಸಂದೇಶ ರವಾನಿಸಿದರು.

ಉಭಯ ಪಕ್ಷಗಳ ನಾಯಕರು ತಮ್ಮ ಹಳೆಯ ವೈಷಮ್ಯವನ್ನು ಮರೆತು ಸಮನ್ವಯ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದರು. ಈ ಮೂಲಕ ಎರಡು ಪಕ್ಷಗಳ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶವನ್ನು ರವಾನಿಸಿದರು. 

ಅಲ್ಲದೇ, ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಸಣ್ಣ ವೈಮನಸ್ಯಕ್ಕೂ ಅವಕಾಶ ಕೊಡದೆ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಬೇಕು ಎಂಬುದನ್ನು ಸಭೆಯ ಮೂಲಕ ತಿಳಿಸಲಾಯಿತು.

ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ಅಗರ್‌ವಾಲ್‌, ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ

ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಉಭಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿದ್ದರು. ಎಲ್ಲರೂ ತಮ್ಮ ಪಕ್ಷಗಳ ಬಾವುಟವನ್ನು ಪ್ರತಿಬಿಂಬಿಸುವ ಕೇಸರಿ ಮತ್ತು ಹಸಿರು ಬಣ್ಣದ ಶಲ್ಯವನ್ನು ಧರಿಸಿದ್ದರು.

ಸಭೆಯಲ್ಲಿ ಎಲ್ಲ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ಪಣತೊಡಲಾಯಿತು. 

ಕಾಂಗ್ರೆಸ್‌ ಅನ್ನು ಸೋಲಿಸುವುದೇ ಪ್ರಮುಖ ಗುರಿಯೊಂದಿಗೆ ಮೈತ್ರಿ ಪಕ್ಷಗಳು ಮಹತ್ವದ ಹೆಜ್ಜೆ ಇಟ್ಟಿದ್ದನ್ನು ರಾಜ್ಯದ ಜನತೆಗೆ ಸಂದೇಶ ರವಾನಿಸಲಾಯಿತು.

ಅಲ್ಲದೇ, ಎದುರಾಳಿ ಕಾಂಗ್ರೆಸ್‌ ಪಕ್ಷವನ್ನು ನಿರ್ಲಕ್ಷ್ಯ ಮಾಡದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ಸಣ್ಣ ಭಿನ್ನಾಭಿಪ್ರಾಯ ವ್ಯಕ್ತವಾದರೆ ಎದುರಾಳಿಗಳಿಗೆ ಅದೇ ಅಸ್ತ್ರವಾಗಲಿದೆ. 

ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬಾರದು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷಗಳ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂಬ ಸೂಚನೆಯನ್ನು ಸಭೆಯ ಮೂಲಕ ನೀಡಲಾಯಿತು.

ಎರಡು ಪಕ್ಷಗಳ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು, ಕೆಲವು ಕ್ಷೇತ್ರಗಳಲ್ಲಿ ಪ್ರಮುಖ ಮುಖಂಡರು ಮೈತ್ರಿ ಪ್ರಚಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂಬುದನ್ನು ಸಭೆಯ ಮೂಲಕ ನಿರ್ದೇಶನ ನೀಡಲಾಯಿತು. 

ಕಾಂಗ್ರೆಸ್‌ ಪಕ್ಷವನ್ನು ಮಣಿಸಬೇಕಾದರೆ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡುವ ಅಗತ್ಯತೆಯನ್ನು ಉಭಯ ಪಕ್ಷಗಳು ಮುಖಂಡರು ತಮ್ಮ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ತಿಳಿಸಿ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.