ಸಾರಾಂಶ
ರೇಷ್ಮೆನಾಡಿನಲ್ಲಿ ಜೆಡಿಎಸ್ ಅನ್ನು ವಾಶ್ ಔಟ್ ಮಾಡಿರುವ ಕಾಂಗ್ರೆಸ್, ರಾಮನಗರ ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದಿದೆ. ದಳಪತಿಗಳ ಪಾಲಿಗೆ ದಶಕಗಳಿಂದಲೂ ರಾಮನಗರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿಯೇ ಉಳಿದಿತ್ತು. ಆದರೀಗ ಕೈ ಪಾಳಯ ಹಂತ ಹಂತವಾಗಿ ಜೆಡಿಎಸ್ ಭದ್ರಕೋಟೆಯನ್ನು ಧ್ವಂಸಗೊಳಿಸಿದೆ.
ಎಂ.ಅಫ್ರೋಜ್ ಖಾನ್
ರಾಮನಗರ : ರೇಷ್ಮೆನಾಡಿನಲ್ಲಿ ಜೆಡಿಎಸ್ ಅನ್ನು ವಾಶ್ ಔಟ್ ಮಾಡಿರುವ ಕಾಂಗ್ರೆಸ್, ರಾಮನಗರ ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದಿದೆ. ದಳಪತಿಗಳ ಪಾಲಿಗೆ ದಶಕಗಳಿಂದಲೂ ರಾಮನಗರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿಯೇ ಉಳಿದಿತ್ತು. ಆದರೀಗ ಕೈ ಪಾಳಯ ಹಂತ ಹಂತವಾಗಿ ಜೆಡಿಎಸ್ ಭದ್ರಕೋಟೆಯನ್ನು ಧ್ವಂಸಗೊಳಿಸಿ ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದೆ.
ಇದೀಗ ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿಯಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ.
2013ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ - 03 ಮತ್ತು ಕಾಂಗ್ರೆಸ್ - 01 ಕ್ಷೇತ್ರವನ್ನು ಗೆದ್ದಿತ್ತು. 2018ರ ಚುನಾವಣೆಯಲ್ಲಿ ಜೆಡಿಎಸ್ - 02, ಕಾಂಗ್ರೆಸ್ - 01 ಹಾಗೂ ಸಮಾಜವಾದಿ ಪಕ್ಷ - 01 ಸ್ಥಾನ ಗೆದ್ದಿತ್ತು. ಆಗ ಅತಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಜೆಡಿಎಸ್, ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು.
ಹೊಸ ದಾಖಲೆ ಬರೆದ ಕೈ ಪಾಳಯ:
2023ರ ಸಾರ್ವತ್ರಿಕ ಚುನಾವಣೆಯಲ್ಲಿ 4 ಕ್ಷೇತ್ರಗಳ ಪೈಕಿ ಕಾಂಗ್ರೆಸ್ - 3, ಜೆಡಿಎಸ್ - 1 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದ್ದವು. ಈಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಹೊಸ ದಾಖಲೆಯೊಂದನ್ನು ಮುಡಿಗೇರಿಸಿಕೊಂಡಿದೆ.
1972 ರಿಂದ 2004ರವರೆಗೆ ಜಿಲ್ಲೆಯಲ್ಲಿ ಸಾತನೂರು ಸೇರಿ 5 ವಿಧಾನಸಭಾ ಕ್ಷೇತ್ರಗಳಿದ್ದವು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ 2008ರಲ್ಲಿ ಸಾತನೂರು ಕ್ಷೇತ್ರವನ್ನು ಕೈ ಬಿಟ್ಟ ನಂತರ 4 ವಿಧಾನಸಭಾ ಕ್ಷೇತ್ರಗಳು ಮಾತ್ರ ಉಳಿದುಕೊಂಡಿದ್ದವು. ಜಿಲ್ಲೆಯಲ್ಲಿ 5 ಮತ್ತು 4 ಕ್ಷೇತ್ರಗಳಿದ್ದಾಗ ಯಾವುದೇ ಒಂದು ಪಕ್ಷ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಉದಾಹರಣೆ ಇರಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಗೆ 2 ಅಥವಾ 3 ಸ್ಥಾನಗಳು ಒಲಿಯುತ್ತಿದ್ದವು.
ಆದರೆ, ಈ ಬಾರಿಯ ಚನ್ನಪಟ್ಟಣ ಉಪಚುನಾವಣೆ ಮೂಲಕ ಕಾಂಗ್ರೆಸ್ ನಾಲ್ಕೂ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು, ಜಿಲ್ಲೆಯಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ
ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿಯವರು 87,229 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (1,12,642ಮತ) ಎದುರು 25,413 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.