ಜೆಡಿಎಸ್ ಕಾರ್ಯಕರ್ತರಿಗೆ ಮೋಸ: ಡಿಸಿಎಂ ಡಿ.ಕೆ.ಶಿವಕುಮಾರ್

| Published : Apr 21 2024, 02:18 AM IST / Updated: Apr 21 2024, 06:06 AM IST

ಸಾರಾಂಶ

 ರಾಮನಗರಕ್ಕೆ ಬಂದ ದೇವೇಗೌಡರು ಮತ್ತು ಕುಟುಂಬ ಅಧಿಕಾರ ಉಂಡು ಕೊಟ್ಟ ಕೊಡುಗೇ ಏನು?, ಇದೀಗ ಮಂಡ್ಯ ಜಿಲ್ಲೆ ನಮ್ಮದು ಎನ್ನುತ್ತಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಜೆಡಿಎಸ್ ವಿರುದ್ಧ ಇದು ಕುಟುಂಬದ ಪ್ರೈವೆಟ್ ಲಿಮಿಟೆಡ್ ಎಂದಿದ್ದರು. ಈಗ ಅವರ ಜೊತೆಯೇ ನೆಂಟಸ್ಥನ ಬೆಳೆಸಿದ್ದಾರೆ.

 ಶ್ರೀರಂಗಪಟ್ಟಣ :  ಜೆಡಿಎಸ್ -ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಎರಡು ಕ್ಷೇತ್ರಗಳೂ ತಮ್ಮ ಕುಟುಂಬದವರನ್ನೇ ಸ್ಪರ್ಧೆಗೆ ನಿಲ್ಲಿಸಿ ಮೂಲಕ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಮಂಡ್ಯ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ. ಜೆಡಿಎಸ್ ಮತ್ತು ಬಿಜೆಪಿ ಎ ಮತ್ತು ಬಿ ಟೀಂ ಇದ್ದಂತೆ ಈಗ ಒಂದಾಗಿವೆ ಎಂದರು.

ಹಾಸನ ಜಿಲ್ಲೆಯಿಂದ ರಾಮನಗರಕ್ಕೆ ಬಂದ ದೇವೇಗೌಡರು ಮತ್ತು ಕುಟುಂಬ ಅಧಿಕಾರ ಉಂಡು ಕೊಟ್ಟ ಕೊಡುಗೇ ಏನು?, ಇದೀಗ ಮಂಡ್ಯ ಜಿಲ್ಲೆ ನಮ್ಮದು ಎನ್ನುತ್ತಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಜೆಡಿಎಸ್ ವಿರುದ್ಧ ಇದು ಕುಟುಂಬದ ಪ್ರೈವೆಟ್ ಲಿಮಿಟೆಡ್ ಎಂದಿದ್ದರು. ಈಗ ಅವರ ಜೊತೆಯೇ ನೆಂಟಸ್ಥನ ಬೆಳೆಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೋಲುವ ಭಯದಿಂದ ಬಿಜೆಪಿಯೊಂದಿಗೆ ಮೈತ್ರಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಗ್ಯಾರಂಟಿಗಳ ಬಗ್ಗೆ ಮಾತನಾಡಿ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ್ದೀರಿ. ಅದಕ್ಕೆ ರಾಜ್ಯ ಮತ್ತು ಮಂಡ್ಯ ಜಿಲ್ಲಾ ಮಹಿಳೆಯರು ಗೋ ಬ್ಯಾಕ್ ಕುಮಾರಸ್ವಾಮಿ ಅಂದರೂ ಇನ್ನು ಬುದ್ಧಿ ಬಂದಿಲ್ಲ. ಮಂಡ್ಯದ ಅನ್ನದಾತರನ್ನು ಕಾಪಾಡಲು ಮಂಡ್ಯದ ನಾಯಕರು ಹೋರಾಟ ಮಾಡುತ್ತಿದ್ದಾರೆ ಎಂದರು.

ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದೆವು. ದಳದವರು ಈ ಹೋರಾಟ ಮಾಡಿದರಾ?, ಮಿಸ್ಟರ್ ಕುಮಾರಸ್ವಾಮಿ ನೀನು ರೈತರ ಪರವಾಗಿ ಇಲ್ಲ. ನಿನ್ನದು ಕೇವಲ ಖಾಲಿ ಮಾತು. ನ್ಯಾಯಾಲಯದಿಂದ ಆದೇಶ ಸಿಗುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌ (ಸ್ಟಾರ್ ಚಂದ್ರು)ಗೆ ಮತ ನೀಡಿ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲಾಗುತ್ತದೆ ಎಂದರು.

ಇದೇ ವೇಳೆ ವಕೀಲ ಚಂದಗಾಲು ವೆಂಕಟೇಶ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಎಂ.ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಪುರಸಭಾ ಸದಸ್ಯ ಎಂ.ಎಲ್. ದಿನೇಶ್, ತಗ್ಗಳ್ಳಿ ವೆಂಕಟೇಶ್ ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು ಇದ್ದರು.

ಬೃಹತ್ ಗಾತ್ರದ ಸೇಬು ಹಾಗೂ ಮೊಸಂಬಿ ಹಾರದಿಂದ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಿದರು.