ಸಾರಾಂಶ
ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ಚುನಾವಣಾ ಸಿದ್ಧತೆ ಸಭೆಗೆ ನಡೆಸಲು ತೆರಳಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜ.4 ರಂದು ಗುರುವಾರ ಹಾಗೂ ಜ.5 ರಂದು ಶುಕ್ರವಾರ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ರಾತ್ರಿಯೇ ದೆಹಲಿಗೆ ತೆರಳಿದರು.ಲೋಕಸಭೆ ಚುನಾವಣಾ ತಯಾರಿ ಆರಂಭಿಸಿರುವ ಕಾಂಗ್ರೆಸ್ ಹೈಕಮಾಂಡ್, ಚುನಾವಣೆ ಕಾರ್ಯ ತಂತ್ರಗಳ ಕುರಿತು ಚರ್ಚಿಸಲು ಎಲ್ಲ ರಾಜ್ಯಗಳ ಪ್ರಮುಖ ನಾಯಕರ ಸಭೆ ಕರೆದಿದೆ.ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಹೈಕಮಾಂಡ್ ಬುಲಾವ್ ನೀಡಿತ್ತು.
ಹೀಗಾಗಿ ಇಬ್ಬರೂ ನಾಯಕರು ಬುಧವಾರ ಸಂಜೆ 7.40ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೆಹಲಿ ತಲುಪಿದ್ದಾರೆ. ದೆಹಲಿಯಲ್ಲಿ ಗುರುವಾರ ಹಾಗೂ ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹೈಕಮಾಂಡ್ ನಾಯಕರ ಜೊತೆ ರಾಜ್ಯ ನಾಯಕರು ಚರ್ಚೆ ನಡೆಸಲಿದ್ದಾರೆ.