ಸಿದ್ದು ಸರ್ಕಾರ ಆರ್ಥಿಕವಾಗಿ ದಿವಾಳಿ: ವಿಜಯೇಂದ್ರ

| Published : Dec 14 2023, 01:30 AM IST

ಸಾರಾಂಶ

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿ ಆರ್ಥಿಕವಾಗಿ ದಿವಾಳಿಯಾಗಿದ್ದು, ರೈತರ, ರಾಜ್ಯದ ಅಭಿವೃದ್ಧಿಗೆ ಹಣಕಾಸು ಹೊಂದಾಣಿಕೆ ಮಾಡದೆ ಕೇಂದ್ರದ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

- ಹಣ ಹೊಂದಿಸದೇ ಕೇಂದ್ರದ ಮೇಲೆ ಗೂಬೆ ಸಲ್ಲದು: ಸದನದಲ್ಲಿ ಬಿಜೆಪಿಗನ ಆಕ್ರೋಶ

ಕನ್ನಡಪ್ರಭ ವಾರ್ತೆ ವಿಧಾನಸಭೆ

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿ ಆರ್ಥಿಕವಾಗಿ ದಿವಾಳಿಯಾಗಿದ್ದು, ರೈತರ, ರಾಜ್ಯದ ಅಭಿವೃದ್ಧಿಗೆ ಹಣಕಾಸು ಹೊಂದಾಣಿಕೆ ಮಾಡದೆ ಕೇಂದ್ರದ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.ಬುಧವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರ ಮತ್ತು ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಯೋಜನೆಗಳನ್ನು ಬಳಕೆ ಮಾಡಬಹುದಾಗಿದೆ. ಆದರೆ, ರಾಜ್ಯ ಸರ್ಕಾರವು ಕೇಂದ್ರದ ಯೋಜನೆಗಳಿಗೆ ಅನುದಾನ ಬಳಕೆ ಮಾಡುತ್ತಿಲ್ಲ. ರಾಜ್ಯದ ಖಜಾನೆ ಖಾಲಿಯಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. ಹಣಕಾಸಿನ ಸಮಸ್ಯೆಯಿಂದಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಆಗ ಮಾತ್ರ ಕೇಂದ್ರವು ತನ್ನ ಪಾಲಿನ ಅನುದಾನವನ್ನು ನೀಡಲಿದೆ. ಕೇಂದ್ರ ಸರ್ಕಾರ ಅನುದಾನ ನೀಡಲಿದೆ ಎಂದು ರಾಜ್ಯ ಸರ್ಕಾರ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದನ್ನು ಬದಿಗಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸದೆ ರೈತರ ಮತ್ತು ರಾಜ್ಯದ ಏಳ್ಗೆಯತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

-------------------ರಾಜ್ಯದಲ್ಲಿ ಬರದಿಂದಾಗಿ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಂಗ್ರೆಸ್‌ ಸರ್ಕಾರ ಕಣ್ಣಿದ್ದು, ಕುರುಡನಂತೆ ಮತ್ತು ಕಿವಿಯಿದ್ದು ಕಿವುಡನಂತೆ ವರ್ತಿಸುತ್ತಿದೆ. ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಕಬ್ಬು, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಲಕ್ಷಾಂತರ ಟನ್‌ ಉತ್ಪಾದನೆಯಾಗುತ್ತದೆ. ಆದರೆ, ಈ ಬಾರಿ ಮಳೆಯ ಕೊರತೆಯಿಂದ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ವಿದ್ಯುತ್ ಕೊರತೆ ಇದ್ದು, ಸರ್ಕಾರ ರೈತರಿಗೆ ಏಳು ಗಂಟೆಗಳ ಕಾಲ ಮೂರು ಫೇಸ್‌ ವಿದ್ಯುತ್ ಪೂರೈಸಬೇಕಾದ ಸರ್ಕಾರವು ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ರಾಜ್ಯಕ್ಕೆ 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. 11 ಸಾವಿರ ಮೆಗಾ ವ್ಯಾಟ್ ಮಾತ್ರ ಉತ್ಪಾದನೆಯಾಗುತ್ತಿದ್ದು, 4 ಸಾವಿರ ಮೆಗಾ ವ್ಯಾಟ್ ಕೊರತೆ ಇದೆ. ಈವರೆಗೂ ವಿದ್ಯುತ್ ಬೇಡಿಕೆ ನೀಗಿಸಿಲ್ಲ ಎಂದು ಹರಿಹಾಯ್ದರು.