ಪೀಯೂಷ್‌ಗೆ ರಾಜ್ಯ ಸರ್ಕಾರ ತಪರಾಕಿ - ಅವರೇನು ಮಾವನ ಮನೆಯಿಂದ ಹಣ ತಂದು ಕೊಡ್ತಾರಾ?

| N/A | Published : Feb 11 2025, 01:46 AM IST / Updated: Feb 11 2025, 04:13 AM IST

ಸಾರಾಂಶ

ಹೆಚ್ಚು ತೆರಿಗೆ ಕಟ್ಟುತ್ತೇವೆಂದು ಕರ್ನಾಟಕ ಹಾಗೂ ಇತರೆ ರಾಜ್ಯಗಳು ಹೆಚ್ಚಿನ ಪಾಲು ಕೇಳುವುದೇ ಸಣ್ಣತನ ಎಂದಿರುವ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರ ವಿರುದ್ಧ ರಾಜ್ಯದ ಸಚಿವರು ತೀವ್ರ ಕಿಡಿಕಾರಿದ್ದಾರೆ.

 ಬೆಂಗಳೂರು : ಹೆಚ್ಚು ತೆರಿಗೆ ಕಟ್ಟುತ್ತೇವೆಂದು ಕರ್ನಾಟಕ ಹಾಗೂ ಇತರೆ ರಾಜ್ಯಗಳು ಹೆಚ್ಚಿನ ಪಾಲು ಕೇಳುವುದೇ ಸಣ್ಣತನ ಎಂದಿರುವ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರ ವಿರುದ್ಧ ರಾಜ್ಯದ ಸಚಿವರು ತೀವ್ರ ಕಿಡಿಕಾರಿದ್ದಾರೆ. ‘ಈ ರೀತಿ ಮಾತನಾಡುವುದೇ ಪೀಯೂಷ್ ಗೋಯಲ್ ಅವರ ಸಣ್ಣತನ, ಅವರಿಗೆ ನಾಚಿಕೆ ಆಗಬೇಕು, ಅವರ ಮಾವನ ಮನೆಯಿಂದ ನಮ್ಮ ರಾಜ್ಯಕ್ಕೆ ತೆರಿಗೆ ಹಣ ಕೊಡ್ತಿದ್ದಾರಾ?’ ಎಂದು ಸಚಿವರಾದ ಡಾ.ಜಿ.ಪರಮೇಶ್ವರ್‌, ರಾಮಲಿಂಗಾರೆಡ್ಡಿ, ಪ್ರಿಯಾಂಕ್‌ ಖರ್ಗೆ ಮತ್ತಿತರ ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ನಿಮಲಾ ಸೀತಾರಾಮನ್‌ ಕರ್ನಾಟಕ ಸರ್ಕಾರ ದಿವಾಳಿಯಾಗಿದೆ ಅಂತಾರೆ. ಪೀಯೂಷ್‌ ಗೋಯಲ್‌ ನಮ್ಮ ತೆರಿಗೆ ಪಾಲು ನಾವು ಕೇಳುವುದೇ ತಪ್ಪು ಅಂತಾರೆ. ನಾವು ಅವರದ್ದೇ ಭಾಷೆಯಲ್ಲಿ ಹೇಳುವುದಾದರೆ ಈ ರೀತಿ ಮಾತನಾಡಲು ನಾಚಿಕೆ ಆಗಬೇಕು. ನಾವು ಕಟ್ಟುವ ತೆರಿಗೆಯಲ್ಲಿ ನಮಗೊಂದಿಷ್ಟು ನ್ಯಾಯಯುತವಾದ ಪಾಲು ಕೊಡಿ ಎಂದು ಕೇಳುವುದೇ ತಪ್ಪಾ? ನಮ್ಮ ಪಾಲಿನ ತೆರಿಗೆ ಕೊಡಲ್ಲ ಎಂದು ಹೇಳಲಿ, ಆಮೇಲೆ ನಾವು ಏನು ಮಾಡಬೇಕೋ ಮಾಡುತ್ತೇವೆ ಎಂದು ಪರೋಕ್ಷ ಎಚ್ಚರಿಕೆಯನ್ನೂ ನೀಡಿದರು.

ಯುಪಿಎ ಸರ್ಕಾರ ಇದ್ದಾಗ ಯೋಜನಾ ಆಯೋಗ ಅಂತ ಮಾಡಿದ್ದೆವು. ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ನೀತಿ ಆಯೋಗ ಅಂತ ಮಾಡಿಕೊಂಡಿದ್ದಾರೆ. ಕರ್ನಾಟಕದಿಂದ ಹೆಚ್ಚು ತೆರಿಗೆ ಕಟ್ಟುವುದಕ್ಕೇ ಹೆಚ್ಚು ತೆರಿಗೆ ಪಾಲು ಕೇಳುತ್ತಿರುವುದು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪೀಯೂಷ್‌ಗೆ ಸಾಮಾನ್ಯ ಜ್ಞಾನ ಇಲ್ಲ:

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಪೀಯೂಷ್‌ ಗೋಯಲ್‌ ಅವರು ಆ ರೀತಿ ಮಾತನಾಡುವುದು ಅವರ ಸಣ್ಣತನ. ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲದಿರುವುದರಿಂದ ಹೀಗೆ ಮಾತನಾಡುತ್ತಿದ್ದಾರೆ. ನಮ್ಮ‌ ರಾಜ್ಯದಿಂದ ಪ್ರತಿ ವರ್ಷ 4.5 ಲಕ್ಷ ಕೋಟಿ ರು. ಜಿಎಸ್‌ಟಿ ಕೇಂದ್ರಕ್ಕೆ‌ ಹೋಗುತ್ತದೆ. ಆದರೆ, ಇದರಲ್ಲಿ ನಮ್ಮ ರಾಜ್ಯಕ್ಕೆ ವಾಪಸ್‌ ಕೊಡುವ ಪಾಲು ಮಾತ್ರ 1 ರು.ಗೆ 12 ಪೈಸೆ ಅಷ್ಟೆ. ಹಾಗಾಗಿ ನ್ಯಾಯಯುತವಾಗಿ ಪಾಲು ಕೊಡಿ ಎಂದು ಹೇಳಿದರೆ ತಪ್ಪೇನಿದೆ? ಹಾಗಾದರೆ ನಾವು ಹೆಚ್ಚು ತೆರಿಗೆ ಕಟ್ಟೋದೇ ತಪ್ಪಾ? ಗೋಯಲ್ ಕರ್ನಾಟಕದವರಾಗಿದ್ದರೆ ಈ ರೀತಿ‌ ಹೇಳುತ್ತಿದ್ರಾ? ಕಡಿಮೆ ಆದಾಯ ಇರುವ ರಾಜ್ಯಗಳ ಜೊತೆಗೆ ಹೆಚ್ಚು ಆದಾಯದ ರಾಜ್ಯಗಳು ಇನ್ನಷ್ಟು ಅಭಿವೃದ್ಧಿ ಆಗಬೇಕು ತಾನೆ. ಅವುಗಳ ಅಭಿವೃದ್ಧಿಗೇ ಕೊಡಲಿ ಹಾಕಿದರೆ ಹೇಗೆ? ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇರುವುದು ಯಾಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾವನ ಮನೆಯಿಂದ ಅನುದಾನ ಕೊಡ್ತಾರಾ?:

ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಅವರ ಮಾವನ ಮನೆಯಿಂದ ಕರ್ನಾಟಕಕ್ಕೆ ಅನುದಾನ ತಂದು ಕೊಡುತ್ತಿದ್ದಾರಾ? ಕೇಂದ್ರದ ಒಬ್ಬ ಸಚಿವರು ಈ ರೀತಿ ಮಾತನಾಡುತ್ತಾರೆಂದರೆ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ರಾಜ್ಯದ ಜನರ ಬಗ್ಗೆ ಗೌರವ, ಕಾಳಜಿ ಇದ್ದರೆ ರಾಜ್ಯದ ಬಿಜೆಪಿ ಸಂಸದರು ಇದನ್ನು ಒಕ್ಕೊರಲಿಂದ ಪ್ರಶ್ನಿಸಬೇಕು ಎಂದು ಆಗ್ರಹಿಸಿದರು.

ಉತ್ತರ ಪ್ರದೇಶದವರು 100 ರು. ತೆರಿಗೆ ಕೊಟ್ಟರೆ ಅವರಿಗೆ 182 ರು. ಪಾಲು ಕೊಡಲಾಗುತ್ತಿದೆ. ಆದರೆ, ಕರ್ನಾಟಕಕ್ಕೆ ಬರೀ 12ರಿಂದ 13 ರು. ತೆರಿಗೆ ಪಾಲು ನೀಡುತ್ತಿದ್ದಾರೆ. ಇದು ಯಾವ ನ್ಯಾಯ? ರಾಜ್ಯಕ್ಕೆ ಇವರು ಮಾಡುತ್ತಿರುವ ಅನ್ಯಾಯವನ್ನು ದೊಡ್ಡತನ ಅನ್ನಬೇಕಾ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಹೆಸರಿದೆ. ಪೀಯೂಷ್‌ ಗೋಯಲ್‌ಗೆ ಧೈರ್ಯ ಇದ್ದರೆ ಇಂಥ ಮಾತನ್ನು ಉತ್ತರಪ್ರದೇಶದ ಕುಂಬಮೇಳಕ್ಕೆ ಹೋಗಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.