ಕರ್ನಾಟಕದಲ್ಲಿ 2.5 ವರ್ಷಗಳ ಆಡಳಿತದ ನಂತರ ಮುಖ್ಯಮಂತ್ರಿಯನ್ನು ಬದಲಿಸಲು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಕೊಲ್ಹಾಪುರ : ಕರ್ನಾಟಕದಲ್ಲಿ 2.5 ವರ್ಷಗಳ ಆಡಳಿತದ ನಂತರ ಮುಖ್ಯಮಂತ್ರಿಯನ್ನು ಬದಲಿಸಲು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊಲ್ಹಾಪುರದಲ್ಲಿ ಶನಿವಾರ ಸಂಜೆ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ 2.5 ವರ್ಷಗಳ ನಂತರ ಮುಖ್ಯಮಂತ್ರಿ ಸ್ಥಾನವನ್ನು ಈಗಿನ ಉಪ ಮುಖ್ಯಮಂತ್ರಿಗೆ ಹಸ್ತಾಂತರಿಸುವ ಯೋಚನೆಯನ್ನು ಕಾಂಗ್ರೆಸ್ ಹೊಂದಿದೆ. 

ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿಯೂ ಈ ವ್ಯವಸ್ಥೆಯನ್ನು ಅವರು ಹೊಂದಿದ್ದರು’ ಎಂದು ಹೇಳಿದರು. ಈ ಮೂಲಕ ಸಿದ್ದರಾಮಯ್ಯ ಹುದ್ದೆಗೆ ಸಂಚಕಾರ ಕಾದಿದ್ದು, ಅವರು ತಮ್ಮ ಸಿಎಂ ಹುದ್ದೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಬಿಟ್ಟುಕೊಡಬೇಕಾಗಬಹುದು ಎಂಬ ಸುಳಿವನ್ನು ಮೋದಿ ಪರೋಕ್ಷವಾಗಿ ನೀಡಿದರು.

ಈ ಹಿಂದೆ ಕರ್ನಾಟಕ ಕಾಂಗ್ರೆಸ್‌ನ ಕೆಲವು ನಾಯಕರು, ಸಿದ್ದರಾಮಯ್ಯ 2.5 ವರ್ಷ ಆಳ್ವಿಕೆ ನಡೆಸಿ ಡಿಕೆಶಿ ಅವರಿಗೆ ಬಿಟ್ಟುಕೊಡಲಿದ್ದಾರೆ. ಈ ರೀತಿ ಹೈಕಮಾಂಡ್‌ ಮಟ್ಟದಲ್ಲೇ ಚರ್ಚೆ ನಡೆದಿದೆ ಎಂದು ಹೇಳಿ ಸಂಚಲನ ಮೂಡಿಸಿದ್ದರು. ಬಳಿಕ ಪಕ್ಷದ ವರಿಷ್ಠರು ಇಂಥ ಹೇಳಿಕೆ ನೀಡಕೂಡದು ಎಂದು ಕಾಂಗ್ರೆಸ್ಸಿಗರಿಗೆ ಕಟ್ಟಪ್ಪಣೆ ಮಾಡಿದ್ದರು. ಆಗ ಕೂಡ ಮೋದಿ ಇಂಥದ್ದೇ ಹೇಳಿಕೆ ನೀಡಿದ್ದರು.