ಪತ್ನಿಗೆ ರಾಜಕೀಯ ಆಸಕ್ತಿಯಿಲ್ಲ, ಎಲೆಕ್ಷನ್‌ಗೆ ನಿಲ್ಲಲ್ಲ: ಕೇಜ್ರಿವಾಲ್

| Published : May 23 2024, 01:03 AM IST / Updated: May 23 2024, 04:50 AM IST

ಪತ್ನಿಗೆ ರಾಜಕೀಯ ಆಸಕ್ತಿಯಿಲ್ಲ, ಎಲೆಕ್ಷನ್‌ಗೆ ನಿಲ್ಲಲ್ಲ: ಕೇಜ್ರಿವಾಲ್
Share this Article
  • FB
  • TW
  • Linkdin
  • Email

ಸಾರಾಂಶ

ಪತ್ನಿ ಸುನೀತಾ ಕೇಜ್ರಿವಾಲ್ ರಾಜಕೀಯದಲ್ಲಿ ಸಕ್ರಿಯರಾಗುತ್ತಾರಾ ಅನ್ನೋ ಪ್ರಶ್ನೆಗೆ ಪತಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉತ್ತರಿಸಿದ್ದು, ತಮ್ಮ ಪತ್ನಿ ಸುನೀತಾಗೆ ರಾಜಕೀಯದಲ್ಲಿ ಯಾವ ಆಸಕ್ತಿಯೂ ಇಲ್ಲ. ಭವಿಷ್ಯದಲ್ಲಿ ಆಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನವದೆಹಲಿ: ತಾವು ಜೈಲಿಗೆ ಹೋದ ಸಂದರ್ಭದಲ್ಲಿ ಆಪ್‌ನಲ್ಲಿ ತಮ್ಮ ಸ್ಥಾನ ತುಂಬಿದ್ದ ಪತ್ನಿ ಸುನೀತಾ ಕೇಜ್ರಿವಾಲ್ ರಾಜಕೀಯದಲ್ಲಿ ಸಕ್ರಿಯರಾಗುತ್ತಾರಾ ಅನ್ನೋ ಪ್ರಶ್ನೆಗೆ ಪತಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉತ್ತರಿಸಿದ್ದು, ತಮ್ಮ ಪತ್ನಿ ಸುನೀತಾಗೆ ರಾಜಕೀಯದಲ್ಲಿ ಯಾವ ಆಸಕ್ತಿಯೂ ಇಲ್ಲ.

 ಭವಿಷ್ಯದಲ್ಲಿ ಆಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಪಕ್ಷದ ಹೊಣೆಯನ್ನು ಹೊತ್ತಿದ್ದ ಸುನೀತಾ ಜೈಲಿನಿಂದ ಕೇಜ್ರಿವಾಲ್ ಕಳುಹಿಸುತ್ತಿದ್ದ ಸಂದೇಶಗಳನ್ನು ಪಕ್ಷದ ಕಾರ್ಯಕರ್ತರಿಗೆ ತಿಳಿಸುತ್ತಿದ್ದರು. ರೋಡ್ ಶೋ, ರ್‍ಯಾಲಿಗಳಲ್ಲಿ ಪಾಲ್ಗೊಂಡು ಭಾಷಣಗಳನ್ನು ಮಾಡುತ್ತಿದ್ದರು. ಹೀಗಾಗಿ ಸುನೀತಾ ರಾಜಕೀಯಕ್ಕೆ ಬರಬಹುದು ಎನ್ನಲಾಗುತ್ತಿದ್ದು ಸದ್ಯ ಕೇಜ್ರಿವಾಲ್ , ಈ ವಿಚಾರವನ್ನು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಲ್ಲಗೆಳೆದಿದ್ದಾರೆ.

‘ನಾನು ಜೈಲಿನಲ್ಲಿದ್ದ ಸಂದರ್ಭದಲ್ಲಿ ಆಕೆ ನನ್ನ ಮತ್ತು ದೆಹಲಿ ನಿವಾಸಿಗಳ ನಡುವೆ ಸೇತುವೆಯಂತಿದ್ದರು. ಅದು ತಾತ್ಕಾಲಿಕ ಹಂತವಷ್ಟೇ. ಆಕೆಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿಲ್ಲ. ಭವಿಷ್ಯದಲ್ಲಿಯೂ ಅವಳು ಚುನಾವಣೆಗೆ ಸ್ಪರ್ಧಿಸಲ್ಲ’ಎಂದು ಹೇದಿದ್ದಾರೆ. 

ಆದರೆ ಪತ್ನಿಯನ್ನು ಹಾಡಿ ಹೊಗಳಿರುವ ದೆಹಲಿ ಸಿಎಂ, ‘ನನ್ನ ಬದುಕಿನ ಪ್ರತಿ ಹಂತದಲ್ಲಿಯೂ ಸುನೀತಾ ಬೆಂಬಲವಾಗಿದ್ದರು. ಅವಳ ರೀತಿಯಲ್ಲಿ ಸಂಗಾತಿ ಸಿಕ್ಕಿರುವುದು ಅದೃಷ್ಟ. ನನ್ನಂಥಹ ವಿಲಕ್ಷಣ ವ್ಯಕ್ತಿಯನ್ನು ಸಹಿಸಿಕೊಳ್ಳುವುದು ಸುಲಭವಲ್ಲ’ ಎಂದಿದ್ದಾರೆ.ಇನ್ನು ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ‘ಈ ವಿಷಯದಲ್ಲಿ 2 ದೃಷ್ಟಿಕೋನಗಳಿವೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು’ ಎಂದಿದ್ದಾರೆ.