ಸಾರಾಂಶ
ನವದೆಹಲಿ: ಮದ್ಯ ಲೈಸೆನ್ಸ್ ಹಗರಣದಲ್ಲಿ ಸೋಮವಾರ ತಿಹಾರ್ ಜೈಲಿಗೆ ವರ್ಗಾಯಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣಾಧೀನ ಕೈದಿ ನಂಬರ್ 670 ನೀಡಲಾಗಿದೆ. ಈ ನಡುವೆ ದೆಹಲಿ ಸಿಎಂ ರಾತ್ರಿಯಿಡೀ ನಿದ್ದೆಯಿಲ್ಲದೇ ಒದ್ದಾಡಿ ಕಳೆದರು. ಇಡೀ ರಾತ್ರಿಯಲ್ಲಿ ಸ್ವಲ್ಪ ಹೊತ್ತು ಮಾತ್ರವೇ ಅವರು ನಿದ್ದೆಗೆ ಜಾರಿದ್ದರು ಎಂದು ಜೈಲಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರ ಸಂಜೆ 4 ಗಂಟೆಗೆ ಜೈಲಿಗೆ ಬಂದ ಕೇಜ್ರಿವಾಲ್ ಅವರನ್ನು ವೈದ್ಯಕೀಯ ತಪಾಸಣೆ ಬಳಿಕ 14 * 8 ಅಡಿ ಅಳತೆಯ ಕೊಠಡಿಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಕೆಲ ಹೊತ್ತು ಸಿಮೆಂಟ್ ನೆಲದ ಮೇಲೆ ಮಲಗಿ ಕಾಲ ಕಳೆದರು. ರಾತ್ರಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 50ಕ್ಕಿಂತ ಕಡಿಮೆ ಇತ್ತು.
ಬೆಳಗ್ಗೆಯೂ ಅದು ಮುಂದುವರೆದಿತ್ತು. ಬೆಳಗ್ಗೆ ಕೆಲ ಹೊತ್ತು ಯೋಗ ಮತ್ತು ಧ್ಯಾನ ಮಾಡಿದರು. ಅವರ ಆರೋಗ್ಯದ ಮೇಲೆ ವೈದ್ಯಾಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸದ್ಯ 600 ಜನ ಕೈದಿಗಳು ಇರುವ 2ನೇ ನಂಬರ್ ಜೈಲಿನಲ್ಲಿ ಕೇಜ್ರಿ ಅವರನ್ನು ಇರಿಸಲಾಗಿದ್ದು, ಅವರಿಗೆ ವಿಚಾರಣಾಧೀನ ಕೈದಿ ನಂ.670 ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿಹಾರ್ ಜೈಲಿನಲ್ಲೇ ದೆಹಲಿ ಮದ್ಯ ಹಗರಣ ಸಂಬಂಧ ಬಂಧಿತ ದೆಹಲಿ ಸಚಿವ ಮನೀಶ್ ಸಿಸೋಡಿಯಾ, ಬಿಆರ್‌ಎಸ್ ಪಕ್ಷದ ಶಾಸಕಿ ಕವಿತಾ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತ ಆಪ್‌ನ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರನ್ನೂ ಇಡಲಾಗಿದೆ.