ಕೇರಳ: ಸಾರ್ವಜನಿಕ ಸ್ಥಳದಲ್ಲಿ ಕಸಹಾಕಿದರೆ 10 ಸಾವಿರ ರು. ದಂಡ
KannadaprabhaNewsNetwork | Published : Oct 17 2023, 12:45 AM IST
ಕೇರಳ: ಸಾರ್ವಜನಿಕ ಸ್ಥಳದಲ್ಲಿ ಕಸಹಾಕಿದರೆ 10 ಸಾವಿರ ರು. ದಂಡ
ಸಾರಾಂಶ
ಮುಂದಿನ ವರ್ಷದ ಮಾರ್ಚ್ ವೇಳೆಗೆ ಕಸಮುಕ್ತ ರಾಜ್ಯವಾಗಬೇಕು ಎಂಬ ಗುರಿ ಹೊಂದಿರುವ ಕೇರಳ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ 10 ಸಾವಿರ ರು. ದಂಡ ವಿಧಿಸಲು ನಿರ್ಧರಿಸಿದೆ.
ಜಲಮೂಲ ಕಲುಷಿತ ಜಾಮೀನು ರಹಿತ ಅಪರಾಧ 2024ರಕ್ಕೆ ಕಸ ಮುಕ್ತ ರಾಜ್ಯ ಮಾಡಲು ಹೊಸ ಕ್ರಮ ತಿರುವನಂತಪುರ: ಮುಂದಿನ ವರ್ಷದ ಮಾರ್ಚ್ ವೇಳೆಗೆ ಕಸಮುಕ್ತ ರಾಜ್ಯವಾಗಬೇಕು ಎಂಬ ಗುರಿ ಹೊಂದಿರುವ ಕೇರಳ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ 10 ಸಾವಿರ ರು. ದಂಡ ವಿಧಿಸಲು ನಿರ್ಧರಿಸಿದೆ. ಅಲ್ಲದೇ ಜಲಮೂಲಗಳನ್ನು ಕಲುಷಿತಗೊಳಿಸುವುದನ್ನು ಜಾಮೀನು ರಹಿತ ಅಪರಾಧ ಎಂದು ಘೋಷಿಸಲಾಗಿದೆ. ಪಂಚಾಯತ್ ರಾಜ್ ಮತ್ತು ಮುನ್ಸಪಲ್ ಕಾಯ್ದೆಗಳಿಗೆ ತಿದ್ದುಪಡಿ ತರುವ 2 ಸುಗ್ರೀವಾಜ್ಞೆಗಳಿಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ ದಂಡದ ಪ್ರಮಾಣವನ್ನು ಹೆಚ್ಚು ಮಾಡುವ ಪ್ರಸ್ತಾಪ ಮಾಡಲಾಗಿದೆ. ‘ಈ ಸುಗ್ರೀವಾಜ್ಞೆಗಳು ರಾಜ್ಯದಲ್ಲಿನ ಕಸ ವಿಲೇವಾರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ. 2024ರ ಮಾ.31ರ ವೇಳೆಗೆ ರಾಜ್ಯವನ್ನು ಘನ ತ್ಯಾಜ್ಯ ಮುಕ್ತ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಇದನ್ನು ಸಾಧಿಸುವುದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದ್ದು ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. 100ಕ್ಕೂ ಹೆಚ್ಚು ಜನ ಭಾಗಿಯಾಗುವ ಸಮಾರಂಭಗಳಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇಂಥ ಕಾರ್ಯಕ್ರಮ ಆಯೋಜಿಸುವವರು ಪೂರ್ವಾನುಮತಿ ಪಡೆಯುವುದು ಕಡ್ಡಾಯ’ ಎಂದು ಸಚಿವ ಎಂ.ಬಿ.ರಾಜೇಶ್ ಹೇಳಿದ್ದಾರೆ. ಈ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ದಂಡದ ಪ್ರಮಾಣ 250 ರು. ಇತ್ತು. ಇದನ್ನು 10 ಸಾವಿರ ರು.ಗೆ ಏರಿಕೆ ಮಾಡಲಾಗಿದೆ.