ಸಾರಾಂಶ
ನವದೆಹಲಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ‘5 ನ್ಯಾಯ 25 ಗ್ಯಾರಂಟಿ’ (ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ) ಘೋಷಣೆ ಮಾಡಿರುವ ಕಾಂಗ್ರೆಸ್, ಆ ಭರವಸೆಯನ್ನು ದೇಶದ ಎಲ್ಲ ಮನೆಗೂ ಮುಟ್ಟಿಸಲು ‘ಮನೆ ಮನೆಗೆ ಗ್ಯಾರಂಟಿ’ (ಘರ್ ಘರ್ ಗ್ಯಾರಂಟಿ) ಅಭಿಯಾನಕ್ಕೆ ಚಾಲನೆ ನೀಡಿದೆ.
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಈ ಅಭಿಯಾನವನ್ನು ಉದ್ಘಾಟಿಸಿ, ಜನರಿಗೆ ‘ಗ್ಯಾರಂಟಿ ಕಾರ್ಡ್’ಗಳನ್ನು ಹಂಚಿದರು. ಈ ವೇಳೆ ಮಾತನಾಡಿದ ಅವರು, 5 ನ್ಯಾಯ, 25 ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸಲು ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡುತ್ತಿದ್ದೇವೆ. ದೇಶದ ಎಲ್ಲ 8 ಕೋಟಿ ಮನೆಗಳಿಗೂ ಇದನ್ನು ತಲುಪಿಸುತ್ತೇವೆ. ನಮ್ಮ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ತಿಳಿಸುತ್ತೇವೆ ಎಂದರು.
ನಮ್ಮ ಸರ್ಕಾರ ಯಾವತ್ತಿಗೂ ಜನರ ಪರ ಕೆಲಸ ಮಾಡುವ ಕಾರಣ ಗ್ಯಾರಂಟಿಯನ್ನು ನೀಡುತ್ತಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೋದಿ ಕೀ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಆದರೆ ಅವು ಜನತೆಗೆ ತಲುಪುವುದೇ ಇಲ್ಲ. ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ ಜನರಿಗೆ ಅದು ಸಿಗಲೇ ಇಲ್ಲ. ನಾವು ಏನು ಭರವಸೆ ನೀಡುತ್ತೇವೆಯೋ ಅದನ್ನು ಈಡೇರಿಸುತ್ತೇವೆ ಎಂದು ದೇಶಕ್ಕೆ ಹೇಳುತ್ತೇವೆ ಎಂದು ಹೇಳಿದರು.