ಬಡತನ ಕಮ್ಮಿ ಆಗಿದೆ ಎಂಬ ಸಮೀಕ್ಷೆ ಬೋಗಸ್‌: ಖರ್ಗೆ

| Published : Feb 28 2024, 02:31 AM IST / Updated: Feb 28 2024, 11:37 AM IST

ಸಾರಾಂಶ

ಕೇಂದ್ರ ಸರ್ಕಾರ ಇತ್ತೀಚೆಗೆ ಬಡತನ ಕಡಿಮೆ ಆಗಿದೆ ಎಂದು ತೋರಿಸಲು ಬಿಡುಗಡೆ ಮಾಡಿದ ಗೃಹ ಬಳಕೆ ವೆಚ್ಚ ಆಧರಿತ ಸಮೀಕ್ಷೆಯು ಚುನಾವಣಾ ಪ್ರೇರಿತ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಬಡತನ ಕಡಿಮೆ ಆಗಿದೆ ಎಂದು ತೋರಿಸಲು ಬಿಡುಗಡೆ ಮಾಡಿದ ಗೃಹ ಬಳಕೆ ವೆಚ್ಚ ಆಧರಿತ ಸಮೀಕ್ಷೆಯು ಚುನಾವಣಾ ಪ್ರೇರಿತ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. 

ಹೀಗಾಗಿ ನಿಖರ ಮಾಹಿತಿ ತಿಳಿಯಲು ಜನಗಣತಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಈ ಕುರಿತು ಟ್ವೀಟ್‌ ಮಾಡಿರುವ ಖರ್ಗೆ, ‘10 ವರ್ಷ ಗಾಢ ನಿದ್ದೆಯ ಬಳಿಕ ಮೋದಿ ಸರ್ಕಾರ ಇದೀಗ ಚುನಾವಣಾ ಪ್ರೇರಿತವಾಗಿರುವ ಗೃಹಬಳಕೆ ವೆಚ್ಚ ಆಧರಿತ ಸಮೀಕ್ಷೆ ಬಿಡುಗಡೆ ಮಾಡಿದೆ. 

ಆದರೆ ಇದರ ಹೊರತಾಗಿಯೂ ಮೋದಿ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ವಿಫಲ ಪ್ರಯತ್ನ ಮಾಡಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಜೊತೆಗೆ ಸಮೀಕ್ಷೆಯ ಮೂಲಕ ದೇಶದಲ್ಲಿ ಎಲ್ಲವೂ ಹೊಳೆಯುತ್ತಿದೆ ಎಂದು ಬಣ್ಣಿಸುತ್ತಿರುವುದಾದರೆ ದೇಶದ ಗ್ರಾಮೀಣ ಭಾಗದ ಶೇ.5ರಷ್ಟು ಜನತೆ ಇನ್ನೂ ಕೇವಲ 46 ರು.ನಲ್ಲೇ ಏಕೆ ದಿನ ಕಳೆಯುತ್ತಿದ್ದಾರೆ ಎಂದು ಖರ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ ನೀತಿ ಆಯೋಗದ ಒಂದು ಸಮೀಕ್ಷೆ ದೇಶದಲ್ಲಿ ಬಡವರ ಸಂಖ್ಯೆ ಶೇ.5ಕ್ಕಿಂತ ಕೆಳಗಿಳಿದಿದೆ ಎಂದು ಹೇಳಿದರೆ ಮತ್ತೊಂದು ಸಮೀಕ್ಷೆ ಬಡವರ ಪ್ರಮಾಣ ಶೇ.11.28ರಷ್ಟಿದೆ ಎಂದಿದೆ. 

ಇಂಥ ವರದಿಗಳನ್ನು ಬಿಡುಗಡೆ ಮಾಡುವ ಮೂಲಕ ಮೋದಿ ಸರ್ಕಾರ ಬಡವರನ್ನು ಅಣಕ ಮಾಡುತ್ತಿದೆ ಎಂದು ಖರ್ಗೆ ಕಿಡಿಕಾರಿದರು.ಜೊತೆಗೆ, ‘ನಮ್ಮದು ಒಂದೇ ಬೇಡಿಕೆ.

 ಖಚಿತ ಮಾಹಿತಿಗಾಗಿ 2021ನೇ ಸಾಲಿನ ಜನಗಣತಿಯನ್ನು ಆದಷ್ಟು ಶೀಘ್ರ ಮಾಡಬೇಕು ಮತ್ತು ಜಾತಿ ಗಣತಿ ಅದರ ಭಾಗವಾಗಿರಬೇಕು’ ಎಂದು ಖರ್ಗೆ ಆಗ್ರಹ ಮಾಡಿದರು.