ಸಾರಾಂಶ
ಬೆಂಗಳೂರು : ಮನುಷ್ಯನಿಗೆ ಜೀವನದಲ್ಲಿ ಜ್ಞಾನ ಮತ್ತು ಧ್ಯಾನ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸ್ನೇಹದೀಪ ಅಂಗವಿಕಲರ ಸಂಸ್ಥೆ ನಗರದ ಯಶವಂತಪುರದ ಜಲಮಂಡಳಿ ರಜತ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾನ್ವೇಷಣೆ ಸಾಂಸ್ಕೃತಿಕ ಕಾರ್ಯಕ್ರಮ-25ರ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯನಿಗೆ ಜೀವನದಲ್ಲಿ ಎರಡು ವಿಷಯ ಬಹಳ ಮುಖ್ಯ, ಒಂದು ಧ್ಯಾನ ಮತ್ತು ಮತ್ತೊಂದು ಜ್ಞಾನ. 21ನೇ ಶತಮಾನ ಜ್ಞಾನದ ಶತಮಾನ. ಈಗ ಯಾರಲ್ಲಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಇನ್ನೊಂದು ಧ್ಯಾನ ಮುಖ್ಯ. ಮನಸ್ಸಿನ ವಿಕಾಸ, ತೃಪ್ತಿ, ಶಾಂತಿ- ನೆಮ್ಮದಿಗಾಗಿ ಧ್ಯಾನ ಮಾಡುತ್ತೇವೆ. ಬಹಳಷ್ಟು ಋಷಿಮುನಿಗಳು ಹಿಮಾಲಯಕ್ಕೆ ಹೋಗಿ ವರ್ಷಾನುಗಟ್ಟಲೇ ಕುಳಿತು ಧ್ಯಾನ ಮಾಡುತ್ತಾರೆ ಎಂದರು.
ಸ್ನೇಹದೀಪ ಸಂಸ್ಥೆ ಕಳೆದ 24 ವರ್ಷಗಳಿಂದ ಅಂಧ ಮಕ್ಕಳಿಗೆ ಪ್ರೇರಣೆ, ವಿಶ್ವಾಸ, ಸ್ವಾಭಿಮಾನ ತುಂಬುವ ಕೆಲಸವನ್ನು ಮಾಡುತ್ತ ಬಂದಿದೆ. ಈ ಮಕ್ಕಳ ಸೇವೆ ಮಾಡುತ್ತಿರುವ ಸ್ನೇಹದೀಪ ಸಂಸ್ಥೆಗೆ ನಾನು ನನ್ನ ಸಂಸದರ ನಿಧಿಯಿಂದ ಸಂಸ್ಥೆಗೆ ₹15 ಲಕ್ಷ ದೇಣಿಗೆ ನೀಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ‘ಕನ್ನಡಪ್ರಭ’ ಪತ್ರಿಕೆಯ ವಿಶೇಷ ಯೋಜನೆ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ, ಸ್ನೇಹ ದೀಪ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಧರ್ಮದರ್ಶಿ ಡಾ। ಪಾಲ್ ಮುದ್ದಾ, ಧರ್ಮದರ್ಶಿ ಕೆ.ಜಿ.ಮೋಹನ್ ಉಪಸ್ಥಿತರಿದ್ದರು.