ಗೃಹ ಸಚಿವ ಅಮಿತ್‌ಶಾ ಹೇಳಿಕೆ ಖಂಡಿಸಿ ಇಂದು ಕೋಲಾರ ನಗರ ಬಂದ್ : ನಾನಾ ಸಂಘಟನೆಗಳ ಬೆಂಬಲ

| Published : Jan 03 2025, 12:32 AM IST / Updated: Jan 03 2025, 04:25 AM IST

ಸಾರಾಂಶ

ಬಿಜೆಪಿ ಕೋಮುವಾದ ಹಾಗೂ ಸಂವಿಧಾನ ವಿರೋಧಿವಾಗಿದೆ. ತಳಸಮುದಾಯದ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಭಾರತದ ರಾಷ್ಟ್ರಪತಿಗಳನ್ನು ಆಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸದೆ ಅಪಮಾನ ಮಾಡಿದ್ದಾರೆ. ಬಿಜೆಪಿ ಈಗಲೂ ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ಆಡಳಿತ ನಿರ್ವಹಿಸುತ್ತಿದೆ.

 ಕೋಲಾರ  : ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತು ಸದನದಲ್ಲಿ ಹೀನಾಯವಾಗಿ ಮಾತನಾಡಿ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ಶಾ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿ ಪ್ರಗತಿ ಪರ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ಕೋಲಾರ ನಗರ ಬಂದ್‌ಗೆ ಜಿಲ್ಲಾ ಕಾಂಗ್ರೇಸ್ ಪಕ್ಷವು ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯ ಮಾತನಾಡಿ, ಕೇಂದ್ರ ಸರ್ಕಾರದಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆಗಳು ಇದೆಯೋ ಇಲ್ಲವೂ ಎಂಬ ಸಂಶಯಕ್ಕೆ ಒಳಪಡುವಂತೆ ಬೇಜವಾಬ್ದಾರಿಯ ಆಡಳಿತ ನಡೆಸಲಾಗುತ್ತಿದೆ. ದೇಶಕ್ಕೆ ಸಾಮಾಜಿಕ ಸ್ವಾತಂತ್ರ್ಯ ಕಲ್ಪಿಸಿದಂತ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಕೇಂದ್ರದ ಗೃಹ ಸಚಿವರಾದ ಅಮಿತ್‌ಶಾ ತುಚ್ಚವಾಗಿ ವೆಂಗ್ಯವಾಡಿರುವುದು ದುರಂತ ಎಂದು ವಿಷಾದಿಸಿದರು. 

ಧರ್ಮದ ಹೆಸರಲ್ಲಿ ಬಿಜೆಪಿ ಆಡಳಿತ

ಬಿಜೆಪಿ ಕೋಮುವಾದ ಹಾಗೂ ಸಂವಿಧಾನ ವಿರೋಧಿವಾಗಿದೆ. ತಳಸಮುದಾಯದ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಭಾರತದ ರಾಷ್ಟ್ರಪತಿಗಳನ್ನು ಆಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸದೆ ಅಪಮಾನ ಮಾಡಿದ್ದಾರೆ. ಬಿಜೆಪಿ ಈಗಲೂ ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ಆಡಳಿತ ನಿರ್ವಹಿಸುತ್ತಿದೆ ಎಂಬುವುದನ್ನು ಸಾಕಷ್ಟು ಉದಾಹರಣೆಗಳಿವೆ ಎಂದರು.

ಅಂಬೇಡ್ಕರ್‌ರನ್ನು ಅಪಮಾನಿಸಿದವರನ್ನು ಸಂಪುಟದಿಂದ ವಜಾಗೊಳಿಸಿ ಕಾನೂನು ಬದ್ದವಾಗಿ ಗಡಿ ಪಾರು ಮಾಡಬೇಕಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸಂವಿಧಾನಕ್ಕೆ ಬಗೆದ ದ್ರೋಹವಾಗಿದೆ ಎಂದು ದೂರಿದರು.

ಶಾಂತಿಯುತ ಬಂದ್‌ಗೆ ಮನವಿ

ಜಿಲ್ಲಾ ಕಾಂಗ್ರೇಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ಕೋಲಾರ ಬಂದ್ ಶಾಂತಿಯುತವಾಗಿರಲಿ ಯಾವುದೇ ಕಾರಣಕ್ಕೂ ಗಲಭೆ ಘರ್ಷಣೆಗಳಿಗೆ ಅವಕಾಶ ಇಲ್ಲದಂತೆ ಬಂದ್ ಆಚರರಿಸುವಂತಾಗ ಬೇಕು, ಕೋಲಾರ ಬಂದ್‌ಗೆ ಜಿಲ್ಲಾ ಕಾಂಗ್ರೇಸ್ ಪಕ್ಷದ ಎಲ್ಲಾ ಶಾಸಕರು ವಿಧಾನ ಪರಿಷತ್ ಸದಸ್ಯರು ಬೆಂಬಲಿಸಿದ್ದಾರೆ ಎಂದರು.ಓ.ಬಿ.ಸಿ ಘಟಕದ ಮುಖಂಡ ಮಂಜುನಾಥ್, ಎಸ್.ಸಿ.ಎಸ್.ಟಿ. ಘಟಕದ ಮುಖಂಡ ಲಾಲ್ ಬಹುದ್ದೂರ್ ಶಾಸ್ತ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕಾರ್ಯದರ್ಶಿ ವೆಂಕಟಪತಪ್ಪ, ನಗರಸಭೆ ಮಾಜಿ ಸದಸ್ಯ ಸಿ.ಸೋಮಶೇಖರ್, ಮುಖಂಡರಾದ ಸುದೀರ್, ಕಿಸಾನ್ ಸೆಲ್ ನಾಗರಾಜ್, ಮಹಿಳಾ ಘಟಕದ ಪ್ರಿಯಾಂಕ, ಸೇವದಳ ಹರಿನಾಥ್, ನವೀನ್ ,ಮನ್ಸೂರ್, ಹಾರೋಹಳ್ಳಿ ಬಾಬು (ರವಿ), ಹರೀಶ್ ಇದ್ದರು.