ಸಾರಾಂಶ
ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪದಾಧಿಕಾರಿಗಳ ಪರಿಷ್ಕೃತ ಪಟ್ಟಿ ಗೊಂದಲದ ಗೂಡಾಗಿದ್ದು, ಇದಕ್ಕೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಕಾರಣ ಎಂದು ಕಾಂಗ್ರೆಸ್ ರಾಜ್ಯ ನಾಯಕತ್ವ ಕೆಂಡಾಮಂಡಲವಾಗಿರುವ ಘಟನೆ ನಡೆದಿದೆ.
ಬುಧವಾರ ಪ್ರಕಟವಾಗಿರುವ ಪರಿಷ್ಕೃತ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವ ಅಮರಾವತಿ ಚಂದ್ರಶೇಖರ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದು ಸೇರಿದಂತೆ ಹಲವು ಗೊಂದಲಗಳಿರುವುದು ಇದಕ್ಕೆ ಕಾರಣವಾಗಿದೆ.
ಎಐಸಿಸಿಯಿಂದ ಸೋಮವಾರ ಪ್ರಕಟವಾಗಿದ್ದ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳಲ್ಲಿ ಕೆಲ ಪರಿಷ್ಕರಣೆಗಳನ್ನು ಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ. ಅದರಲ್ಲೂ ತೀವ್ರ ಗೊಂದಲಗಳು ಉಂಟಾಗಿದ್ದು ಮೂರು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಂಡ್ಯದ ಅಮರಾವತಿ ಚಂದ್ರಶೇಖರ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೀಡಲಾಗಿದೆ. ಒಂದು ಕುಟುಂಬಕ್ಕೆ ಒಂದೇ ಪದಾಧಿಕಾರಿ ಹುದ್ದೆ ಎಂದು ತಿಳಿಸಲಾಗಿತ್ತು. ಆದರೆ ರಾಜಗೋಪಾಲರೆಡ್ಡಿ ಹಾಗೂ ಸುಷ್ಮಾ ರಾಜಗೋಪಾಲರೆಡ್ಡಿ ಇಬ್ಬರೂ ಪತಿ ಪತ್ನಿಯರಿಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಇನ್ನು ಬಿ.ಆರ್. ನಾಯ್ಡು ಅವರಿಗೆ ಎರಡು ಬಾರಿ ಪ್ರಧಾನ ಕಾರ್ಯದರ್ಶಿ ಹುದ್ದೆ ಕಲ್ಪಿಸಲಾಗಿದ್ದು, ಅನಾಮಧೇಯ ಸತ್ಯಪ್ರಕಾಶ್ ಎಂಬುವವರೂ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿಯಂತಹ ಪ್ರಮುಖ ಸ್ಥಾನ ಗಿಟ್ಟಿಸಿದ್ದಾರೆ.
ನಾಸಿರ್ ಹುಸೇನ್ ಪಾತ್ರ?:
ಇದಲ್ಲದೆ ಎಂಟು ಜಿಲ್ಲಾಧ್ಯಕ್ಷರ ನೇಮಕ ತಡೆ ಹಿಡಿಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಿಫಾರಸು ಮಾಡಿರುವ ಹೆಸರುಗಳಿಗೆ ಬದಲಿಗೆ ಬೇರೆಯವರ ನೇಮಕ ಆಗಿದೆ. ಇದರಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪಾತ್ರ ಇದೆ ಎಂದು ರಾಜ್ಯ ನಾಯಕರು ತೀವ್ರ ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಸೀರ್ ಹುಸೇನ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ದಿನವೇ ವಿಧಾನಸೌಧದಲ್ಲಿ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರಿಂದ ವಿವಾದ ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.