ಸಾರಾಂಶ
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯಲ್ಲಿ ಬಂಧಿತರಾದವರ ಕುಟುಂಬದವರಿಗೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಾಂತ್ವನ ಹೇಳಿ, ಬಂಧಿತರನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಸಚಿವರು ಬಾಧಿತ ಕುಟುಂಬಗಳಿಗೆ ನೆರವು ಮತ್ತು ಆರ್ಥಿಕ ನೆರವು ನೀಡುವ ಭರವಸೆ ನೀಡಿದರು.
ನಾಗಮಂಗಲ : ಯಾರೂ ಹೆದರಬೇಡಿ, ನಿಮ್ಮ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನಾನು ಭರವಸೆ ಕೊಡುತ್ತೇನೆ. ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುತ್ತೇನೆ. ವಕೀಲರನ್ನು ನಾನೇ ನೇಮಿಸಿಕೊಡುತ್ತೇನೆ ಎಂದು ನಾಗಮಂಗಲದ ಬದರಿಕೊಪ್ಪಲು ಮಹಿಳೆಯರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದ್ದಾರೆ.
ಗಣೇಶ ವಿಸರ್ಜನೆ ಸಂದರ್ಭ ಗಲಭೆ ನಡೆದ ನಾಗಮಂಗಲದ ಬದರಿಕೊಪ್ಪಲಿಗೆ ಗುರುವಾರ ಸಂಜೆ ಭೇಟಿ ನೀಡಿದ ಸಚಿವರು, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಮ್ಮವರಲ್ಲಿ ಹಲವರು ಜೈಲು ಸೇರಿದ್ದಾರೆ. ಗಂಡಸರು ಊರು ಬಿಟ್ಟಿದ್ದಾರೆ. ಬಂಧನಕ್ಕೆ ಹೆದರಿ ಯುವಕರು ಊರನ್ನೇ ತೊರೆದಿದ್ದಾರೆ. ನಮ್ಮ ಕುಟುಂಬಕ್ಕೆ ಆಧಾರವೇ ಇಲ್ಲ. ವಯಸ್ಸಾದವರನ್ನು ಆರೈಕೆ ಮಾಡುವವರಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯನ್ನು ನಾವೆಂದೂ ಎದುರಿಸಿರಲಿಲ್ಲ ಎಂದು ಸಚಿವರ ಎದುರು ಗ್ರಾಮದ ನಿವಾಸಿಗಳು ಕಣ್ಣೀರಿಟ್ಟರು.
ಕುಟುಂಬ ನಿರ್ವಹಣೆಯ ಖರ್ಚನ್ನು ಭರಿಸುವುದೂ ಕಷ್ಟವಾಗಿದೆ. ಗಂಡಸರಿಲ್ಲದ ಕಾರಣ ಒಂದು ವಾರಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ತಂದಿಟ್ಟುಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳು ಯಾವ ತಪ್ಪನ್ನೂ ಮಾಡಿಲ್ಲ. ಅವರನ್ನು ಬಂಧಿಸಿದ್ದಾರೆ. ಜೈಲಿನಲ್ಲಿ ಏನು ಕಷ್ಟ ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುವ ದಾರಿಯೇ ಕಾಣುತ್ತಿಲ್ಲ. ಹೇಗಾದರೂ ನಮಗೆ ಸಹಾಯ ಮಾಡಿ. ಇಂತಹ ಸ್ಥಿತಿಯಲ್ಲಿ ನಮ್ಮ ಬೆಂಬಲಕ್ಕೆ ನಿಲ್ಲಲು ಯಾರೂ ಇಲ್ಲವೆಂದು ಅಳಲು ತೋಡಿಕೊಂಡರು.ಮಹಿಳೆಯರನ್ನು ಸಮಾಧಾನಪಡಿಸಿದ ಸಚಿವರು, ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನ ಜೈಲಿನಿಂದ ಬಿಡಿಸುತ್ತೇನೆ ಎಂದರು.