ನನ್ನ ಬಗ್ಗೆ ಕುಮಾರಸ್ವಾಮಿ ಗೆ ಭಯ: ನಾನು ಅಧಿಕಾರದಲ್ಲಿ ಇದ್ರೆ ಅವರ ಪಕ್ಷ ದುರ್ಬಲವಾಗುತ್ತದೆ ಅನ್ನೋ ಅಂಜಿಕೆ

| Published : Oct 05 2024, 12:51 PM IST

Siddaramaiah

ಸಾರಾಂಶ

ಜೆಡಿಎಸ್‌ ನಾಯಕ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ನನ್ನ ಬಗ್ಗೆ ಭಯ. ನಾನು ಅಧಿಕಾರದಲ್ಲಿ ಇದ್ದರೆ ಅವರ ಪಕ್ಷ ದುರ್ಬಲವಾಗುತ್ತದೆ ಎನ್ನುವ ಭಯ ಅವರನ್ನು ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ಕೊಪ್ಪಳ   ಜೆಡಿಎಸ್‌ ನಾಯಕ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ನನ್ನ ಬಗ್ಗೆ ಭಯ. ನಾನು ಅಧಿಕಾರದಲ್ಲಿ ಇದ್ದರೆ ಅವರ ಪಕ್ಷ ದುರ್ಬಲವಾಗುತ್ತದೆ ಎನ್ನುವ ಭಯ ಅವರನ್ನು ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ತಾಲೂಕಿನ ಗಿಣಿಗೇರಾ ವಿಮಾನ ತಂಗುದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜಿ.ಟಿ.ದೇವೇಗೌಡ ಅವರು ಮೈಸೂರು ದಸರಾ ಸಮಾರಂಭದಲ್ಲಿ ತಮ್ಮ ಪರವಾಗಿ ಮಾತನಾಡಿದ ಕುರಿತು ಪ್ರಶ್ನಿಸಿದಾಗ, ಜಿ.ಟಿ.ದೇವೇಗೌಡ ಅವರು ಹೇಳಿರುವುದು ಸರಿಯಾಗಿದೆ. ಅವರ ಪಕ್ಷದವರೇ ಹೇಳಿದ ಮೇಲೆ ಮತ್ತೇನಿದೆ?. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಭಯ ಇದೆ. ನನ್ನ ಕಂಡರೆ ಅವರಿಗೆ ಭಯವಿದೆ. ಬಿಜೆಪಿ, ಜೆಡಿಎಸ್‌ನವರಿಗೆ ನಾನು ಅಧಿಕಾರದಲ್ಲಿದ್ದರೆ ತಾವು ದುರ್ಬಲವಾಗುತ್ತೇವೆ ಎಂಬ ಭಯ ಕಾಡುತ್ತಿದೆ ಎಂದು ಟೀಕಿಸಿದರು.

ನಾನು ದೆಹಲಿಗೆ ಹೋಗುವುದಿಲ್ಲ

ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿ, ನಾನು ದೆಹಲಿಗೆ ಹೋಗುತ್ತೇನೆ ಎಂದು ಹೇಳಿದವರು ಯಾರು ಎಂದು ಮಾಧ್ಯಮದವರ ವಿರುದ್ಧ ಗರಂ ಆದರು. ನಾನು ದೆಹಲಿಗೆ ಹೋಗುವುದಿಲ್ಲ ಎಂದ ಮೇಲೆ ನಾಯಕರನ್ನು ಭೇಟಿ ಮಾಡುವುದು ಎಲ್ಲಿಂದ‌ ಬಂತು ಎಂದರು.

ಖರ್ಗೆ-ಸತೀಶ್ ಜಾರಕಿಹೋಳಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು.

ಸತೀಶ್ ಜಾರಕಿಹೋಳಿ ಅವರು ಸಚಿವರು

. ಎಐಸಿಸಿ ಅಧ್ಯಕ್ಷರು, ಸಚಿವರು ಭೇಟಿ ಆಗಬಾರದಾ?. ಭೇಟಿಯಾದರೆ ಅದಕ್ಕೆ ರಾಜಕೀಯ ಬಣ್ಣ ಕಟ್ಟಿದರೆ ಹೇಗೆ ಎಂದು ಪ್ರಶ್ನಿಸಿದರು.

ನಾನು ಮೈಸೂರಿನಲ್ಲಿ ನಡೆದ ದಸರಾ ಸಮಾರಂಭದಲ್ಲಿ ಚಾಮುಂಡಿ ದೇವಿಗೆ ಪ್ರಾರ್ಥಿಸಿದ್ದು, ಪ್ರತಿವರ್ಷ ದಸರಾ ಮಾಡುತ್ತೇವೆ. ಮುಂದಿನ ವರ್ಷವೂ ದಸರಾ ಮಾಡುತ್ತೇವೆ. ಇನ್ನೊಂದು ವರ್ಷ ಆಶೀರ್ವಾದ ಮಾಡು ಎಂದು ಪ್ರಾರ್ಥಿಸಿದ್ದೇನೆ. ಮುಂದಿನ ವರ್ಷ ಮತ್ತೆ ಪೂಜೆ ಮಾಡ್ತೇವೋ ಇಲ್ವೋ?. ಪ್ರತಿ ವರ್ಷ ದಸರಾ ಮಾಡ್ತೇವೆ.

ಆ ಅರ್ಥದಲ್ಲಿ ನಾನು ಹೇಳಿದ್ದು ಎಂದು ಸ್ಪಷ್ಟನೆ ನೀಡಿದರು.