ಕುಮಾರಸ್ವಾಮಿ ಮೈತ್ರಿಧರ್ಮ ಪಾಲಕರು: ಕೃಷಿಸಚಿವಚಲುವರಾಯಸ್ವಾಮಿ

| Published : Dec 22 2023, 01:30 AM IST

ಕುಮಾರಸ್ವಾಮಿ ಮೈತ್ರಿಧರ್ಮ ಪಾಲಕರು: ಕೃಷಿಸಚಿವಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ನವರಂತೆ ಯಾರಿಂದಲೂ ಮೈತ್ರಿಧರ್ಮ ಪಾಲಿಸಲಾಗದು, ಸುರೇಶ್‌ಗೌಡ ಎದುರು ಸ್ಪರ್ಧಿಸಿ ಗೆಲ್ಲೋದುಂಟೇ?: ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ವ್ಯಂಗ್ಯ, ಬಹುಶಃ ಇವತ್ತು ಜೆಡಿಎಸ್‌ಗೆ ಬಹಳ ಪ್ರಬಲವಾದ ಅಭ್ಯರ್ಥಿ ಎಂದರೆ ಸುರೇಶ್‌ಗೌಡ. ಅವರೇ ಅಭ್ಯರ್ಥಿಯಾದರೆ ನಾವು ಏನು ಮಾಡೋದು ಎಂದು ಯೋಚಿಸುತ್ತಿದ್ದೇವೆ. ಇನ್ನು ನಾವು ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿಧರ್ಮ ಪಾಲಕರು. ಜೆಡಿಎಸ್‌ನವರಂತೆ ಯಾರಿಂದಲೂ ಮೈತ್ರಿಧರ್ಮ ಪಾಲಿಸಲಾಗುವುದಿಲ್ಲ ಎಂದು ಜೆಡಿಎಸ್- ಬಿಜೆಪಿ ಮೈತ್ರಿ ಕುರಿತಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಡಂಬನಾತ್ಮಕವಾಗಿ ಹೇಳಿದರು.

ಜೆಡಿಎಸ್ ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಧರ್ಮಸಿಂಗ್ ಜೊತೆ ನಂತರ ಬಿಜೆಪಿಯ ಯಡಿಯೂರಪ್ಪನವರ ಜೊತೆ ಇದ್ದು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈತ್ರಿ ಧರ್ಮವನ್ನು ರಾಷ್ಟ್ರದಲ್ಲಿ ಎಲ್ಲರಿಗಿಂತ ಬಹಳ ಚೆನ್ನಾಗಿ ನಡೆಸೋದು ಜೆಡಿಎಸ್ ಮಾತ್ರ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಜೆಡಿಎಸ್‌ನವರಿಗೆ ಒಳ್ಳೆಯದಾಗಲಿ. ೫೦-೫೦, ೪೦-೫೦, ೩೦-೭೦ ಯಾವ ರೀತಿಯಲ್ಲಿ ಮೈತ್ರಿಯಾದರೂ ನಮಗೆ ಸಂತೋಷ. ಆ ವಿಚಾರವಾಗಿ ನಮಗೆ ಯಾವುದೇ ದ್ವೇಷ ಇಲ್ಲ. ಜೆಡಿಎಸ್‌ನವರು ನಮ್ಮ ಹಳೆಯ ಸ್ನೇಹಿತರು. ಬಿಜೆಪಿಯವರು ಈಗ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂದರೆ ಖುಷಿಪಡುತ್ತೇವೆ ಎಂದು ನುಡಿದರು.

ಸುರೇಶ್‌ಗೌಡ ವಿರುದ್ಧ ಗೆಲ್ಲೋಕೆ ಆಗುತ್ತಾ?

ಸುರೇಶ್‌ಗೌಡ ಜೆಡಿಎಸ್‌ನ ಪ್ರಬಲ ಅಭ್ಯರ್ಥಿ. ಅವರ ವಿರುದ್ಧ ಗೆಲ್ಲೋಕೆ ಆಗುತ್ತಾ?, ಎಲ್ಲಾದ್ರೂ ಉಂಟಾ?, ಸುರೇಶ್‌ಗೌಡ ಕಣಕ್ಕಿಳಿದರೆ ನಾವು ಅಭ್ಯರ್ಥಿ ಹುಡುಕುವುದು ಕಷ್ಟ ಎಂದು ಚುನಾವಣೆಯಲ್ಲಿ ಚಲುವರಾಯಸ್ವಾಮಿ ನನ್ನ ಪ್ರತಿಸ್ಪರ್ಧಿಯಾಗಿ ನಿಂತು ಗೆಲ್ಲಲಿ ಎಂಬ ಮಾಜಿ ಶಾಸಕ ಸುರೇಶ್‌ಗೌಡ ಸವಾಲಿಗೆ ವ್ಯಂಗ್ಯವಾಗಿ ಉತ್ತರಿಸಿದರು.

ಬಹುಶಃ ಇವತ್ತು ಜೆಡಿಎಸ್‌ಗೆ ಬಹಳ ಪ್ರಬಲವಾದ ಅಭ್ಯರ್ಥಿ ಎಂದರೆ ಸುರೇಶ್‌ಗೌಡ. ಅವರೇ ಅಭ್ಯರ್ಥಿಯಾದರೆ ನಾವು ಏನು ಮಾಡೋದು ಎಂದು ಯೋಚಿಸುತ್ತಿದ್ದೇವೆ. ಇನ್ನು ನಾವು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಬೇರೆ ಯಾರಾದರೂ ಆಗಿದ್ದರೆ ಸುಲಭವಾಗಿ ಅಭ್ಯರ್ಥಿಯನ್ನು ಘೋಷಿಸಬಹುದಿತ್ತು. ಸುರೇಶ್‌ಗೌಡ ಸ್ಪರ್ಧೆಗಿಳಿದರೆ ನಮಗೆ ಅಭ್ಯರ್ಥಿ ಹುಡುಕುವುದೇ ಕಷ್ಟವಾಗುತ್ತದೆ ಎಂದು ಸುರೇಶ್‌ಗೌಡರ ವಿರುದ್ಧ ನಯವಾಗಿಯೇ ವಾಗ್ದಾಳಿ ನಡೆಸಿದರು.