10 ವರ್ಷದಿಂದ ಅಭಿವೃದ್ಧಿ ಕಾಣದ ಲೇಔಟ್‌: ಚುನಾವಣೆ ಬಹಿಷ್ಕಾರ

| Published : Apr 19 2024, 01:37 AM IST / Updated: Apr 19 2024, 04:40 AM IST

ಸಾರಾಂಶ

ಕಳೆದ 10 ವರ್ಷದಿಂದ ಮೂಲಸೌಕರ್ಯ ಅಭಿವೃದ್ಧಿ ಪಡಿಸಿಲ್ಲ ಎಂದು ಆರೋಪಿಸಿರುವ ಇಂದಿರಾನಗರ ವ್ಯಾಪ್ತಿಯ ಪುಲಕೇಶಿನಗರ ವಾರ್ಡ್‌ನ ಮೈಕೆಲ್‌ ಪಾಳ್ಯದ ನಿವಾಸಿಗಳು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

 ಬೆಂಗಳೂರು :  ಕಳೆದ 10 ವರ್ಷದಿಂದ ಮೂಲಸೌಕರ್ಯ ಅಭಿವೃದ್ಧಿ ಪಡಿಸಿಲ್ಲ ಎಂದು ಆರೋಪಿಸಿರುವ ಇಂದಿರಾನಗರ ವ್ಯಾಪ್ತಿಯ ಪುಲಕೇಶಿನಗರ ವಾರ್ಡ್‌ನ ಮೈಕೆಲ್‌ ಪಾಳ್ಯದ ನಿವಾಸಿಗಳು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಪುಲಕೇಶಿನಗರ ವಾರ್ಡ್‌ನ ಇಂದಿರಾನಗರ 80 ಅಡ್ಡ ರಸ್ತೆಯ ಮೈಕೆಲ್‌ ಲೇಔಟ್‌ನ ನಿವಾಸಿಗಳು ಸಹಿ ಸಂಗ್ರಹಿಸಿ ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಪತ್ರ ಬರೆದು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಕಳೆದ ಹಲವು ವರ್ಷದಿಂದ ರಸ್ತೆ ಗುಂಡಿ ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮಳೆ ನೀರು ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 

ಜವಾಬ್ದಾರಿಯುತ ನಾಗರಿಕರಾಗಿ ತೆರಿಗೆ ಪಾವತಿಸಿ, ಕಾನೂನು ಬದ್ಧವಾಗಿ ಚುನಾವಣೆಯಲ್ಲಿ ಮತದಾನ ಮಾಡಿಕೊಂಡು ಬರುತ್ತಿದ್ದೇವೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಆಗಮಿಸುವ ರಾಜಕಾರಣಿಗಳು ನೀಡಿದ ಆಶ್ವಾಸನೆಗಳು ಈಡೇರಿಸಿಲ್ಲ. ಹೀಗಾಗಿ, ಮೈಕಲ್‌ ಲೇಔಟ್‌ನ ಕುಂದುಕೊರತೆಗಳನ್ನು ಪರಿಹಾರಕ್ಕೆ ಬೇರೆ ದಾರಿ ಇಲ್ಲದೇ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಬೇಕೆಂದು ತೀರ್ಮಾನಿಸಿದ್ದೇವೆ ಪತ್ರದಲ್ಲಿ ತಿಳಿಸಿದ್ದಾರೆ.