ನನಗೆ ಸಿ.ಟಿ.ರವಿ ನಿಂದಿಸಿದ್ದು ಸತ್ಯ ಅವರ ವಿರುದ್ಧ ಕ್ರಮವಾಗಲಿ - ಸಿಐಡಿ ಅಧಿಕಾರಿಗಳ ಮುಂದೆ ಹೆಬ್ಬಾಳ್ಕರ್‌ ಹೇಳಿಕೆ

| Published : Jan 04 2025, 11:49 AM IST

lakshmi hebbalkar
ನನಗೆ ಸಿ.ಟಿ.ರವಿ ನಿಂದಿಸಿದ್ದು ಸತ್ಯ ಅವರ ವಿರುದ್ಧ ಕ್ರಮವಾಗಲಿ - ಸಿಐಡಿ ಅಧಿಕಾರಿಗಳ ಮುಂದೆ ಹೆಬ್ಬಾಳ್ಕರ್‌ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

 ಸದನದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸತ್ಯ. ಕಾನೂನು ಪ್ರಕಾರ ಅವರ ಮೇಲೆ ತನಿಖೆ ನಡೆದು ಶಿಕ್ಷೆಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರು : ತನ್ನನ್ನು ವಿಧಾನಪರಿಷತ್ ಸದನದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸತ್ಯ. ಕಾನೂನು ಪ್ರಕಾರ ಅವರ ಮೇಲೆ ತನಿಖೆ ನಡೆದು ಶಿಕ್ಷೆಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ನಿಂದನೆ ಪ್ರಕರಣದ ಹಿನ್ನೆಲೆಯಲ್ಲಿ ನಗರದ ಸಚಿವ ಅಧಿಕೃತ ಸರ್ಕಾರಿ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಪ್ರಕರಣದ ಕುರಿತು ಸಿಐಡಿ ಡಿಐವೈಎಸ್ಪಿ ಅಂಜುಮಾಲಾ ನಾಯ್ಕ್ ನೇತೃತ್ವದ ತಂಡ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ.

ಕಳೆದ ತಿಂಗಳು ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಚಿವರಿಗೆ ಅಸಂಸದೀಯ ಪದ ಬಳಸಿ ನಿಂದಿಸಿದ ಆರೋಪಕ್ಕೆ ಬಿಜೆಪಿ ಸದಸ್ಯ ಸಿ.ಟಿ.ರವಿ ತುತ್ತಾಗಿದ್ದು, ಅವರ ಮೇಲೆ ಸಚಿವರ ದೂರು ಆಧರಿಸಿ ಪ್ರಕರಣ ದಾಖಲಾಗಿದೆ.

ಡಿ.19 ರಂದು ವಿಧಾನಪರಿಷತ್ ಸದನದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ನಿಂದಿಸಿದರು. ಹತ್ತಕ್ಕೂ ಹೆಚ್ಚು ಬಾರಿ ಅವರು ಅಸಂಸದೀಯ ಪದ ಬಳಸಿದ್ದಾರೆ. ಈ ನಿಂದನೆ ಕುರಿತು ವಿಡಿಯೋ ಹಾಗೂ ಆಡಿಯೋ ಪುರಾವೆಗಳಿವೆ. ಅಲ್ಲದೆ ಅಂದು ಸದನದಲ್ಲಿದ್ದ ಕಾಂಗ್ರೆಸ್, ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷದ ಸದಸ್ಯರೂ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಸತ್ಯ ಗೊತ್ತಾಗಲಿದೆ. ನನ್ನ ಬಳಿ ಸಾಕ್ಷ್ಯಗಳನ್ನು ನೀಡುತ್ತೇನೆ ಎಂದು ತನಿಖಾ ತಂಡಕ್ಕೆ ಸಚಿವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೂರ್ಣ ಮಾಹಿತಿ ನೀಡಿದ್ದೇನೆ-ಹೆಬ್ಬಾಳ್ಕರ್‌: ಸಿಐಡಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತನಿಖಾ ತಂಡಕ್ಕೆ ಘಟನೆ ಕುರಿತು ಪೂರ್ಣ ಮಾಹಿತಿ ನೀಡಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ಪ್ರಕರಣದ ತನಿಖೆಯೂ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ. ನನಗೆ ಅನ್ಯಾಯವಾಗಿದೆ. ಇದು ಇಡೀ ಮನುಕುಲಕ್ಕೆ ಆಗಿರುವ ಅನ್ಯಾಯ. ನನ್ನ ಜೊತೆ ಎಲ್ಲರೂ ನಿಂತುಕೊಳ್ಳಬೇಕು. ಪ್ರಕರಣವನ್ನು ಪ್ರತಿಷ್ಠೆಯಾಗಿ, ರಾಜಕೀಯವಾಗಿ ತೆಗೆದುಕೊಂಡಿಲ್ಲ. ನನಗೆ ಅನ್ಯಾಯ ಆಗಿದೆ. ಇದು ನನ್ನ ಸ್ವಾಭಿಮಾನದ ಪ್ರಶ್ನೆ. ತನಿಖೆ ಈಗಷ್ಟೇ ಆರಂಭವಾಗಿದೆ. ತನಿಖೆ ಸೂಕ್ತ ರೀತಿಯಲ್ಲಿ ನಡೆಯಲಿ. ಈ ಹಂತದಲ್ಲಿ ಹೆಚ್ಚು ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.