ಸಾರಾಂಶ
ಚಿಕ್ಕಬಳ್ಳಾಪುರ : ಬೆಂಗಳೂರಿನ ಆರ್.ಆರ್ ನಗರ ಶಾಸಕ ಮುನಿರತ್ನಂ ನಾಯ್ಡು ಅವರು ಹೆಣ್ಣುಮಕ್ಕಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದರೂ ಅವರನ್ನು ಆರ್.ಎಸ್.ಎಸ್ ಹೇಗೆ ಸಹಿಸಿಕೊಳ್ಳುತ್ತಿದೆ. ಕೂಡಲೇ ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಒತ್ತಾಯಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮುನಿರತ್ನ ಪ.ಜಾತಿಯವರ ಕುರಿತು ಜಾತಿ ನಿಂದನೆ ಮಾಡಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡದಿದ್ದರೆ ಎಸ್ಸಿ ಮತ್ತು ಒಕ್ಕಲಿಗ ಸಮುದಾಯಗಳು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಟೀಕಿಸಲು ನೈತಿಕ ಹಕ್ಕಿಲ್ಲ
ಸದಾ ವೈಯಕ್ತಿಕ ಟೀಕೆಗಳಿಗೆ ಇಳಿಯುವ ಬಿಜೆಪಿಯವರು ಶಾಸಕ ಪ್ರದೀಪ್ ಈಶ್ವರ್ ಅವರ ತಂದೆ-ತಾಯಿ ಸಾವಿನ ಕುರಿತು ಸುದ್ದಿಗೋಷ್ಠಿಯಲ್ಲಿ ಟೀಕೆ ಮಾಡಲು ಇವರಿಗೆ ಯಾವ ನೈತಿಕತೆಯೂ ಇಲ್ಲ. ಸಂಸದ ಸುಧಾಕರ್ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆನಂತರ ಮಾತನಾಡಬೇಕು ಎಂದರು.
ಕಾಮಗಾರಿಗಳೇ ಸಾಕ್ಷಿ
ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡುವ ಬಿಜೆಪಿಯವರಿಗೆ ನಗರದ ಪೋಶೆಟ್ಟಿಹಳ್ಳಿ, ತೋಂಡೇನಹಳ್ಳಿ, ಮುದ್ದೇನಹಳ್ಳಿ, ದಿಬ್ಬೂರು ರಸ್ತೆ ಸೇರಿದಂತೆ ನಗರದ ಹಲವೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳೇ ಶಾಸಕರ ಮಾಡುತ್ತಿರುವ ಅಭಿವೃದ್ಧಿಗೆ ಸಾಕ್ಷಿ.
ಅದಷ್ಟೇ ಅಲ್ಲದೆ 25 ಕೋಟಿ ವಿಶೇಷ ಅನುದಾನದ ಕ್ರಿಯಾ ಯೋಜನೆ ಸಹ ತಯಾರಿ ಹಂತದಲ್ಲಿದೆ. ಎತ್ತಿನಹೊಳೆ ಯೋಜನೆಯಡಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ 6 ಕೋಟಿ ರುಪಾಯಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದು ನಗರ ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಎಂದು ಮಾಹಿತಿ ನೀಡಿದರು.ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ.ಎನ್.ಜಯರಾಮ್ ಮಾತನಾಡಿ, ಬಿಜೆಪಿಯವರು ವೈಯಕ್ತಿಕ ನಿಂದನೆಗಳನ್ನು ಬಿಡಬೇಕು. ಅಭಿವೃದ್ಧಿ ವಿಚಾರವಾಗಿ ಮಾತಾಡೋಣ ಎಂದರು. ಈ ವೇಳೆ ಅಡ್ಡಗಲ್ ಶ್ರೀಧರ್, ಜನಾರ್ದನ್, ಆವಲರೆಡ್ಡಿ, ಲಕ್ಷ್ಮಣ್ ಮತ್ತಿತರರು ಇದ್ದರು.