ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯದಲ್ಲಿ ಬಿಜೆಪಿಗೆ ಸುಳ್ಳೇ ಬಂಡವಾಳವಾಗಿದೆ, ಅವರ ಸುಳ್ಳುಗಳಿನ ಮಾತುಗಳಿಗೆ ಬೆಲೆ ಇಲ್ಲವಾಗಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿಂದಿಲ್ಲ, ಅನುದಾನಕ್ಕೆ ಸರ್ಕಾರದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.ನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅನುದಾನ ಬಿಡುಗಡೆಯ ಬಗ್ಗೆ ಯಾವುದೇ ದಾಖಲೆಗಳನ್ನು ನೀಡದೆಯೇ ನೀರಿನ ಮೇಲಿನ ಬರಹದಂತೆ ಬಿಜೆಪಿ ನಾಯಕರ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಅನುದಾನ ನೀಡಿಲ್ಲರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರಕಾರದಿಂದ ಎನ್.ಡಿ.ಆರ್.ಎಫ್. ಅನುದಾನ ಬಿಡುಗಡೆಯಾಗಿಲ್ಲ, ಖುದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೋದಿರನ್ನು ಭೇಟಿ ಮಾಡಿ ಬರ ಪರಿಹಾರ ನಿಧಿ ಬಿಡುಗಡೆಗೆ ಮನವಿ ಮಾಡಿದ್ದರೂ ಈ ಕ್ಷಣದವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.
ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕಿನ ರೈತರಿಗೆ ತಲಾ ಎರಡು ಸಾವಿರ ಬರ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಬರ ಪರಿಹಾರ ನಿರ್ವಹಣೆಗೆ ಟಾಸ್ಕ್ ಫೋರ್ಸ್ ಸಿದ್ದವಿದ್ದು, ಹಣ ಸಹ ಜಿಲ್ಲಾಧಿಕಾರಿ ಖಾತೆಯಲ್ಲಿದೆ, ಹಸುಗಳಿಗೆ ಮೇವಿಗಾಗಿ ಪಕ್ಕದ ಆಂಧ್ರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಮಾತುಕತೆ ನಡೆಸಿದ್ದು, ಅಗತ್ಯ ಬಿದ್ದಲ್ಲಿ ತಕ್ಷಣ ಗೋ ಶಾಲೆಗಳನ್ನು ತೆರೆದು ಮೇವು ತರಿಸಿಕೊಳ್ಳುವ ಎಲ್ಲಾ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.ನಗರದಲ್ಲೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ನೀರಿನ ಕೊರತೆ ಕಂಡು ಬಂದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುವುದು, ಕೆ.ಸಿ.ವ್ಯಾಲಿ ನೀರಿನ ಗುಣಮಟ್ಟದ ಬಗ್ಗೆ ಈಗಾಗಲೇ ಪರೀಕ್ಷೆಗಳು ನಡೆದಿದ್ದು, ಅಂತರ ಜಲ ವೃದ್ಧಿಗೆ ಪೂರವಾಗಿದೆಯೆಂದು ಸಾಬೀತಾಗಿದೆ. ಬಿಜೆಪಿಯ ಮುಖಂಡರು ಬಾಯಿಗೆ ಬಂದಂತೆ ಮಾತಾಡಿದರೆ ಕಾಂಗ್ರೆಸ್ ಕಾರ್ಯಕರ್ತರು, ತಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.