4ನೇ ಹಂತ ಚುನಾವಣೆಯಲ್ಲಿ ಶೇ.63ರಷ್ಟು ಮತದಾನ

| Published : May 14 2024, 01:05 AM IST / Updated: May 14 2024, 04:33 AM IST

ಸಾರಾಂಶ

10 ರಾಜ್ಯಗಳ 96 ಕ್ಷೇತ್ರಗಳಿಗೆ ನಡೆದ ಲೋಕಸಭೆ ಚುನಾವಣೆಯ 4ನೇ ಚರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಸಂಜೆ 5ರವರೆಗೆ ಸುಮಾರು ಶೇ.63ರಷ್ಟು ಮತದಾನವಾಗಿದೆ.

 ನವದೆಹಲಿ :  10 ರಾಜ್ಯಗಳ 96 ಕ್ಷೇತ್ರಗಳಿಗೆ ನಡೆದ ಲೋಕಸಭೆ ಚುನಾವಣೆಯ 4ನೇ ಚರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಸಂಜೆ 5ರವರೆಗೆ ಸುಮಾರು ಶೇ.63ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗಕ್ಕೆ ನಿಖರ ಅಂಕಿ ಅಂಶಗಳು ಲಭ್ಯವಾದ ನಂತರ ಮತದಾನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ತೆಲಂಗಾಣ ವಿಧಾನಸಭೆಯ ಎಲ್ಲ ಹಾಗೂ ಒಡಿಶಾ ವಿಧಾನಸಭಾ ಮೊದಲ ಚರಣದ 28 ಕ್ಷೇತ್ರಗಳಿಗೆ ಕೂಡ ಮತದಾನ ನಡೆಯಿತು. ಒಡಿಶಾದಲ್ಲಿ ಶೇ.63 ಹಾಗೂ ಆಂಧ್ರಪ್ರದೇಶದಲ್ಲಿ ಶೇ.68ರಷ್ಟು ಮತದಾನವಾಗಿದೆ.

ಈ ನಡುವೆ ದೇಶದಲ್ಲೇ ಅತಿ ಹೆಚ್ಚು ಮತದಾನ ಪ.ಬಂಗಾಳದಲ್ಲಿ ನಡೆದಿದ್ದು, ಶೇ.76ರಷ್ಟು ಮತ ಚಲಾವಣೆ ಆಗಿವೆ. ಜಮ್ಮು-ಕಾಶ್ಮೀರದಲ್ಲಿ ಅತಿ ಕಡಿಮೆ- ಎಂದರೆ ಶೇ.38ರಷ್ಟು ಮಾತ್ರ ಮತದಾನ ನಡೆದಿದೆ.

ಆಂಧ್ರಪ್ರದೇಶ, ತೆಲಂಗಾಣ, ಪ.ಬಂಗಾಳ, ಬಿಹಾರ ಸೇರಿದಂತೆ ಕೆಲವು ಕಡೆ ಹಿಂಸಾಚಾರ, ಮತಗಟ್ಟೆ ವಶದ ಯತ್ನ. ಅಭ್ಯರ್ಥಿಗಳು-ಮತದಾರರ ನಡುವೆ ಘರ್ಷಣೆ- ಇತ್ಯಾದಿ ಘಟನೆಗಳು ಸಂಭವಿಸಿವೆ.

ಕಳೆದ ಲೋಕಸಭೆ ಚುನಾವಣೆಯ 4ನೇ ಹಂತದಲ್ಲಿ ಶೇ.65.5ರಷ್ಟು ಮತದಾನವಾಗಿತ್ತು.

ದಕ್ಷಿಣ ರಾಜ್ಯಗಳಲ್ಲಿ ಮತದಾನ ಸಂಪೂರ್ಣ

ಸೋಮವಾರ 4ನೇ ಹಂತದ ಲೋಕಸಭೆ ಚುನಾವಣೆ ಮುಕ್ತಾಯ ಆಗುವುದರೊಂದಿಗೆ ದಕ್ಷಿಣ ಭಾರತದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾದಂತಾಗಿದೆ. ಇದೇ ವೇಳೆ ದೇಶದ 379 ಕ್ಷೇತ್ರಗಳ ಮತದಾನ ಸಂಪೂರ್ಣ ಆದಂತಾಗಿದ್ದು, ಇನ್ನು ಕೊನೆಯ 3 ಹಂತಗಳಲ್ಲಿ 164 ಕ್ಷೇತ್ರಗಳ ಮತದಾನ ಬಾಕಿ ಉಳಿದಂತಾಗಲಿದೆ. ಎಲ್ಲ ಕಡೆ ಒಟ್ಟಿಗೇ ಜೂ.4ರಂದು ಮತ ಎಣಿಕೆ ನಡೆಯಲಿದೆ.