ಕೇಂದ್ರದ ಸಾಲ ಸೌಲಭ್ಯ ಪಡೆದುಕೊಳ್ಳಿ: ರಾಮದಾಸ್

| Published : Oct 27 2023, 12:30 AM IST

ಕೇಂದ್ರದ ಸಾಲ ಸೌಲಭ್ಯ ಪಡೆದುಕೊಳ್ಳಿ: ರಾಮದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದ ಸಾಲ ಸೌಲಭ್ಯ ಪಡೆದುಕೊಳ್ಳಿ: ರಾಮದಾಸ್ಯೋಜನೆಗಳ ಕುರಿತು ಜಾಗೃತಿಗಾಗಿ ರಾಜ್ಯಾದ್ಯಂತ ಪ್ರವಾಸ । ರಾಜ್ಯದ 18 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ
ಯೋಜನೆಗಳ ಕುರಿತು ಜಾಗೃತಿಗಾಗಿ ರಾಜ್ಯಾದ್ಯಂತ ಪ್ರವಾಸ । ರಾಜ್ಯದ 18 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ಕನ್ನಡಪ್ರಭ ವಾರ್ತೆ ದಾವಣಗೆರೆ ಸಾಂಪ್ರದಾಯಿಕ ವೃತ್ತಿಪರರು ಹಾಗೂ ಅಸಂಘಟಿತ ವಲಯದಲ್ಲಿ ಬರುವ ಕಸುಬುದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಎಂ ಸ್ವನಿಧಿ ಹಾಗೂ ಪಿಎಂ ವಿಶ್ವಕರ್ಮ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಆಗಸ್ಟ್ 5ಕ್ಕೆ ಈ ಉಭಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಪಿಎಂ ಸ್ವನಿಧಿ ಮತ್ತು ವಿಶ್ವಕರ್ಮ ಯೋಜನೆಗಳ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್ ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗಳ ಕುರಿತು ಜಾಗೃತಿಗಾಗಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಅಧಿಕ ಜನರು ಇದರ ಪ್ರಯೋಜನವನ್ನು ಪಡೆಯಬೇಕು. ಇದರಲ್ಲಿ 7 ಲಕ್ಷದ 36 ಸಾವಿರ ಜನ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅವಕಾಶದ ಉಪಯೋಗವನ್ನು ರಾಜ್ಯದ ಜನತೆ ಪಡೆಯಬೇಕು ಎಂದು ಹೇಳಿದರು. ಸೆ. 17ರಂದು ಮೋದಿಯವರ ಜನ್ಮದಿನದಂದು ಈ ಎರಡು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಸಾಂಪ್ರದಾಯಿಕ ಕಾಯಕ ಮಾಡುವ ಜಾತಿಗಳು ಇದರ ಸದುಪಯೋಗ ಪಡೆಯಬೇಕು. ರಾಜ್ಯದ 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ದಾವಣಗೆರೆ ಜಿಲ್ಲೆಯು ಒಂದಾಗಿದ್ದು, ಎಲ್ಲಾ 18 ವಿವಿಧ ಜಾತಿಯ ಜನಾಂಗದವರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. ಈ ಯೋಜನೆಗೆ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ ಅಲ್ಲದೇ ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಮುಂದಿನ 5 ವರ್ಷಗಳ ಕಾಲ ಅಂದರೆ 2028ರ ವರೆಗೆ ಈ ಉಭಯ ಯೋಜನೆಗಳು ಇರಲಿವೆ. ಈ ಯೋಜನೆಯಲ್ಲಿ ಆಯ್ಕೆಯಾದ ಫಲಾಫಲಗಳಿಗೆ ಏಳು ದಿನ ತರಬೇತಿ ನೀಡಲಾಗುತ್ತದೆ. ದಿನವೊಂದಕ್ಕೆ 500 ರು. ಗಳನ್ನು ಭತ್ಯೆ ನೀಡಲಾಗುತ್ತಿದ್ದು, ಊಟ ಮತ್ತು ವಸತಿಯನ್ನು ನೀಡಲಾಗುತ್ತದೆ. ಸಾಂಪ್ರದಾಯಿಕ ವೃತ್ತಿಪರರಿಗೆ ವಿಶೇಷ ತರಗತಿ ಬೇಕಾಗಿದ್ದರೆ ಮತ್ತೆ 15 ದಿನಗಳ ಕಾಲ ವಿಶೇಷ ತರಬೇತಿ ನೀಡಿ ಅವರನ್ನು ವೃತ್ತಿಪರನ್ನಾಗಿ ಮಾಡಲಾಗುವುದು. ಈಗಾಗಲೇ ಈ ಯೋಜನೆಗೆ ಕೇಂದ್ರ ಸರ್ಕಾರವು ₹13,000 ಕೋಟಿ ಹಣವನ್ನು ನೀಡಿದೆ ಎಂದರು. ಕೇಂದ್ರ ಸರ್ಕಾರದ ಎಂಎಸ್‌ಎಂಇ ಇಲಾಖೆಯಿಂದ ಪ್ರಮಾಣ ಪತ್ರ ಮಾತ್ರವಲ್ಲದೆ, ಗುರುತಿನ ಚೀಟಿ ನೀಡಲಾಗುವುದು. ಯಾವುದೇ ಬ್ಯಾಂಕುಗಳಿಂದ ಹಣ ದೊರೆಯುವುದಿಲ್ಲ. ನೇರವಾಗಿ ಕೇಂದ್ರ ಸರ್ಕಾರವೇ ಈ ಹಣವನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ಕಳಿಸಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಸಾಲದ ಯೋಜನೆಗಳಲ್ಲಿ ಶೇಕಡಾ 89ರಷ್ಟು ಮರುಪಾವತಿ ಆಗಿದೆ. ಗ್ರಾಮಾಂತರ ಮಾತ್ರವಲ್ಲದೆ ನಗರ ಪ್ರದೇಶಗಳ ಜನರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಪಾಲಿಕೆಯ ಉಪ ಮೇಯರ್ ಯಶೋಧ ಯೋಗೇಶ್ವರ್, ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಮಾಜಿ ಎಂಎಲ್‌ಸಿ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಲೋಕಿಕೆರೆ ನಾಗರಾಜ್, ಕೆ.ಎಸ್. ನವೀನ್, ಶಿವಕುಮಾರ್, ಬಿ.ಎಂ.ಸತೀಶ್, ಗಾಯತ್ರಿ ಖಂಡೋಜಿರಾವ್, ಎಚ್.ಪಿ.ವಿಶ್ವಾಸ್, ಕಿಶೋರ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. - - - 26ಕೆಡಿವಿಜಿ36ಃ ದಾವಣಗೆರೆಯಲ್ಲಿ ಕೇಂದ್ರ ಸರ್ಕಾರದ ಸಾಲಸೌಲಭ್ಯಗಳ ಕುರಿತು ಎಸ್.ಎ.ರಾಮದಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.