ಮೋದಿ ಸಾಧನೆ ಕುರಿತು ಜನತೆಗೆ ಅರಿವು ಮೂಡಿಸಿ

| Published : Apr 01 2024, 12:51 AM IST / Updated: Apr 01 2024, 07:47 AM IST

ಸಾರಾಂಶ

ಕೋಲಾರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ಮಾದರಿಯಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಬೇಕು, ಮನೆ, ಮನೆ ಭೇಟಿ ಮೋದಿ ಸರ್ಕಾರದ ಸಾಧನೆಗಳ ಅರಿವು ಮೂಡಿಸಲು ನಿರ್ಧಾರ

 ಕೋಲಾರ : ಕೇಂದ್ರದಲ್ಲಿ ನರೇಂದ್ರ ಮೋದಿ ಹ್ಯಾಟ್ರಿಕ್ ಸಾಧನೆ ಮಾಡುವುದು ಖಚಿತ. ರಾಜ್ಯದಲ್ಲಿ ೨೮ ಸ್ಥಾನಗಳಿಗೆ ೨೮ ಎನ್.ಡಿ.ಎ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ. ಕೋಲಾರ ಮೀಸಲು ಕ್ಷೇತ್ರದಲ್ಲಿ ಮಲ್ಲೇಶ್‌ಬಾಬು ಕಳೆದ ಚುನಾವಣೆಗಿಂತ ಅತ್ಯಧಿಕ ಮತಗಳಿಂದ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ಕೇಶವ್ ಪ್ರಸಾದ್ ಹೇಳಿದರು.

ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ಮಾದರಿಯಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಬೇಕು, ಮನೆ, ಮನೆ ಭೇಟಿ ಮೋದಿ ಸರ್ಕಾರದ ಸಾಧನೆಗಳ ಅರಿವು ಮೂಡಿಸಬೇಕೆಂದು ಹೇಳಿದರು.

ದೇಶದ ಭವಿಷ್ಯಕ್ಕಾಗಿ ಮೋದಿ

ಶಿಡ್ಲಘಟ್ಟ ಶಾಸಕ ರವಿಕುಮಾರ್ ಮಾತನಾಡಿ, ಪ್ರಸ್ತುತ ದೇಶದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಜತೆ ಜೆ.ಡಿ.ಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಮನ್ವ ಸಮಿತಿ ರಚಿಸಲಾಗಿದೆ. ನಾವೆಲ್ಲಾ ಮೋದಿ ಕೈಬಲಪಡಿಸಲು ಎನ್.ಡಿ.ಎ. ಅಭ್ಯರ್ಥಿ ಮಲ್ಲೇಶ್‌ಬಾಬುರನ್ನು ಶತಾಯ ಗತಾಯ ಗೆಲ್ಲಿಸಲೇಬೇಕೆಂದು ಹೇಳಿದರು.ಜೆ.ಡಿ.ಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಈ ಹಿಂದಿನ ಕೇಂದ್ರ ಸರ್ಕಾರಗಳ ಆಡಳಿತದಲ್ಲಿ ಎಂದೋ ಕಾಣದಂತ ಪ್ರಗತಿದಾಯಕ ಅಭಿವೃದ್ದಿ ಕಾರ್ಯಕ್ರಮ ಬಿಜೆಪಿ ೧೦ ವರ್ಷದಲ್ಲಿ ಮಾಡಿದೆ, ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಎರಡು ಪಕ್ಷಗಳ ಸಮನ್ವ ಸಮಿತಿ ಸಂಘಟನೆಯು ಯಶಸ್ವಿಯಾಗಿರುವುದು ನಮಗೆ ಪ್ರಥಮ ಗೆಲುವು ಆಗಿದೆ ಎಂದು ಹೇಳಿದರು.

ಮೋದಿಯಂತ ನಾಯಕ ಮತ್ತೊಬ್ಬರಿಲ್ಲ

ವಿಧಾನ ಪರಿಷತ್ ಮಾಜಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಳೆದ ೬೫ ವರ್ಷ ಕಾಲ ಕಾಂಗ್ರೆಸ್ ಆಡಳಿತ ನಡೆಸಿದ್ದು ಸಂವಿಧಾನ ಬದ್ಧವಾಗಿ ಆಡಳಿತ ನಡೆಸಿದ್ದರೆ ಇಂದು ಬಿಜೆಪಿ, ಜೆಡಿಎಸ್ ಪಕ್ಷಗಳ ಅವಶ್ಯಕತೆ ಇರಲಿಲ್ಲ, ಮಾಜಿ ಪ್ರಧಾನಿ ದೇವೇಗೌಡರೇ ಒಪ್ಪಿಕೊಂಡಿರುವಂತೆ ಮೋದಿಗಿಂಥ ಮತ್ತೊಬ್ಬ ನಾಯಕನಿಲ್ಲ ಎಂದು ಶ್ಲಾಘಿಸಿದರು.

ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ನಿಮಗೆ ಸ್ಥಳೀಯವಾಗಿ ಸ್ಪಂದಿಸುವಂತ ವ್ಯಕ್ತಿ ಮಲ್ಲೇಶ್ ಬಾಬು ಬೇಕಾ ಅಥವಾ ಹೊರಗಿಯ ಯಾವುದೂ ವ್ಯಕ್ತಿ ಬೇಕೋ ಎಂಬುದನ್ನು ಮತದಾರರೇ ನಿರ್ಧರಿಸಲಿ. ಸೂರ್ಯ ಚಂದ್ರರು ಇರುವುದು ಎಷ್ಟೋ ಸತ್ಯವೂ ಮಲ್ಲೇಶ್‌ಬಾಬು ಈ ಭಾರಿ ಆಯ್ಕೆಯಾಗುವುದು ಸಹ ಅಷ್ಟೇ ಸತ್ಯ ಎಂದರು. ವೈ.ಸಂಪಂಗಿ ಅಸಮಾಧಾನ:

ಸಭೆಯಲ್ಲಿ ಭಾಷಣಕ್ಕೆ ಅವಕಾಶ ಸಿಗಲಿಲ್ಲವೆಂದು ಕೆಜಿಎಫ್‌ನ ಮಾಜಿ ಶಾಸಕ ಬಿಜೆಪಿಯ ವೈ.ಸಂಪಂಗಿ ಅಸಮಾಧಾನಗೊಂಡು ವೇದಿಕೆಯಿಂದ ಕೆಳಗಿಳಿದರು, ಸಂಸದ ಎಸ್.ಮುನಿಸ್ವಾಮಿ, ‘ಸಮಯ ಅಭಾವವಿದೆ. ಮುಖಂಡರು ಮಾತನಾಡಿದ್ದು ಸಾಕು’ ಎಂದಿದ್ದು ಅವರ ಕೋಪ ನೆತ್ತಿಗೇರಿಸಿತು. ಬಳಿಕ ಮಾಲೂರು ಮಂಜುನಾಥಗೌಡ. ವರ್ತೂರು ಪ್ರಕಾಶ್ ಕರೆದು ಮಾತನಾಡಲು ಅವಕಾಶ ನೀಡಿದರು. ಸಂಪಂಗಿ ಮಾತನಾಡಿ, "ನನ್ನ ಅಸಮಾಧಾನವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬೇಡಿ. ಮೈತ್ರಿ ಅಭ್ಯರ್ಥಿ ಗೆಲ್ಲಿಸುವುದೇ ನನ್ನ ಗುರಿ " ಎಂದರು.

ಸಭೆಯಲ್ಲಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ, ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ ಮಾತನಾಡಿದರು.