ಮಾಲೂರಿನಲ್ಲಿ ರಾಜಕೀಯ ರಂಗೇರಿಸಿದ ಪುರಸಭೆ ಚುನಾವಣೆ : 15 ಕಾಂಗ್ರೆಸ್‌ ಸದಸ್ಯರ ಪ್ರವಾಸ

| Published : Aug 20 2024, 12:49 AM IST / Updated: Aug 20 2024, 04:30 AM IST

ಸಾರಾಂಶ

ಮಾಲೂರು ಪುರಸಭೆಯ ನೂತನ ಅಧ್ಯಕ್ಷರ ಆಯ್ಕೆಗೆ ಆಗಸ್ಟ್ 23 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ 15 ಸದಸ್ಯರು ಶಾಸಕರ ಸೂಚನೆ ಮೇರೆಗೆ ಪ್ರವಾಸ ತೆರಳಿದ್ದಾರೆ. ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರಗೊಂಡಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಪೈಪೋಟಿ ಏರ್ಪಟ್ಟಿದೆ.

 ಮಾಲೂರು :  ಇಲ್ಲಿನ 27 ಸದಸ್ಯ ಬಲದ ಪುರಸಭೆಯ ನೂತನ ಅಧ್ಯಕ್ಷರ ಆಯ್ಕೆಗೆ ಆ. ೨೩ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ 15 ಸದಸ್ಯರು ಶಾಸಕ ಕೆ.ವೈ.ನಂಜೇಗೌಡ ಸೂಚನೆ ಮೇರೆಗೆ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಪರಿಶಿಷ್ಟ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಿಡಲಾಗಿದೆ. ಸದ್ಯ ಹದಿನೈದು ಸದಸ್ಯರಿರುವ ಕಾಂಗ್ರೆಸ್‌ ಒಗ್ಗಟ್ಟು ಉಳಿಸಿಕೊಳ್ಳಲು ಪ್ರವಾಸಕ್ಕೆ ತೆರಳಿದೆ. ಬಹುಮತಕ್ಕೆ ಮೂರು ಸದಸ್ಯರ ಕೊರತೆ ಇರುವ ಬಿಜೆಪಿಯಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಸದಸ್ಯರಿಗೆ ಗಾಳ ಹಾಕಲು ತಂತ್ರ ರೂಪಿಸುತ್ತಿದೆ.

ಬಿಜೆಪಿಯಲ್ಲಿ ಬಣ ರಾಜಕೀಯ

೨೦೨೦ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಸದಸ್ಯರಲ್ಲಿ ೧೧ ಮಂದಿ ಕಾಂಗ್ರೆಸ್‌, ಜೆಡಿಎಸ್‌ ಒಂದು , ಪಕ್ಷೇತರ ೫ ಹಾಗೂ ಬಿಜೆಪಿಯ ೧೦ ಮಂದಿ ಆಯ್ಕೆಯಾಗಿದ್ದರು. ನಂತರ ತಾಲೂಕು ರಾಜಕೀಯದಲ್ಲಿ ಬದಲಾದ ಸನ್ನಿವೇಶದಲ್ಲಿ ಜೆಡಿಸ್‌ ಸದಸ್ಯ ಹಾಗೂ ಪಕ್ಷೇತರು ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿಯ ೧೦ ಸದಸ್ಯರಲ್ಲಿ ಮಾಜಿ ಶಾಸಕ ಮಂಜುನಾಥ್‌ ಗೌಡ ಹಾಗೂ ಸ್ವಾಭಿಮಾನಿ ಜನತಾ ಪಕ್ಷದ ಹೊಡಿ ವಿಜಯಕುಮಾರ್‌ ಗುಂಪುಗಳಿಗೆ ಚದುರಿಹೋಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಪತ್ನಿ ವಿಜಯಲಕ್ಷ್ಮಿ, ಪದ್ಮಾವತಿ ಮುನಿಶ್ಯಾಮಿ, ಕೋಮಲ ನಾರಾಯಣ್‌ ಹಾಗೂ ಹೇಮಾ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೂಡಿ ಬಣದ ಮಂಜುಳ ಕೂರಿ ಮಂಜುನಾಥ್‌ ಹಾಗೂ ಮಾಜಿ ಶಾಸಕ ಮಂಜುನಾಥ್‌ ಗೌಡ ಬಣದ ಸುಮಿತ್ರ ರಾಮಮೂರ್ತಿ ಆಕಾಂಕ್ಷಿಗಳಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ

ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಅಧಿಕಾರ ಅನುಭವಿಸಿರುವ ಭವ್ಯ ಶಂಕರ್‌ ಬಿಟ್ಟರೆ ಕಾಂಗ್ರೆಸ್‌ ನಲ್ಲಿ ಉಳಿದಿರುವ ಏಕೈಕ ಸದಸ್ಯೆ ವಿಜಯಲಕ್ಷ್ಮಿ ಕೃಷ್ಣಪ್ಪ ಅವರು ಎಸ್‌ ಸಿ. ಮೀಸಲಾತಿಯಡಿಯಲ್ಲಿ ಒಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಿಲ್ಲಲಿದ್ದಾರೆ. ವಿರೋಧ ಪಕ್ಷದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಅನಿತಾ ನಾಗರಾಜ್‌ ಪ್ರಬಲ ಆಕಾಂಕ್ಷಿ ಆಗಿದ್ದಾರೆ.