ಸಿದ್ದರಾಮಯ್ಯ ಪರ ಮತ್ತೆ ಅವರ ಆಪ್ತ ಸಚಿವರ ಬ್ಯಾಟಿಂಗ್‌ - ಕುರ್ಚಿ ಖಾಲಿ ಇಲ್ಲ: ಸಿಎಂ

| Published : Jan 13 2025, 10:00 AM IST

Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾಗಿದೆ ಎಂಬ ವರದಿ ಹಾಗೂ ಡಿಕೆಶಿ ಸಿಎಂ ಆಗಬೇಕು ಎಂಬ ಅವರ ಆಪ್ತರ ಹೇಳಿಕೆಗಳ ನಡುವೆಯೇ ಸಿದ್ದು ಪರ ಸಂಪುಟದ ಸಚಿವರು ಬ್ಯಾಟಿಂಗ್‌ ನಡೆಸಿದ್ದಾರೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾಗಿದೆ ಎಂಬ ವರದಿ ಹಾಗೂ ಡಿಕೆಶಿ ಸಿಎಂ ಆಗಬೇಕು ಎಂಬ ಅವರ ಆಪ್ತರ ಹೇಳಿಕೆಗಳ ನಡುವೆಯೇ ಸಿದ್ದು ಪರ ಸಂಪುಟದ ಸಚಿವರು ಬ್ಯಾಟಿಂಗ್‌ ನಡೆಸಿದ್ದಾರೆ. ಎಚ್‌.ಸಿ. ಮಹದೇವಪ್ಪ, ಕೆ.ಎನ್‌.ರಾಜಣ್ಣ, ಬೈರತಿ ಸುರೇಶ್‌ ಸೇರಿ ಸಂಪುಟದ ಹಿರಿಯ ಸಚಿವರು ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಪುನರುಚ್ಚರಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ‌. ಕುರ್ಚಿಯ ಬಗ್ಗೆ ಯಾವ ಚರ್ಚೆಗಳು ಆಗಿಲ್ಲ‌. ಅನಾವಶ್ಯಕವಾಗಿ ಚರ್ಚೆ ಆಗುತ್ತಿದೆ ಅಷ್ಟೇ’ ಎಂದರು. ‘ಡಿ.ಕೆ.‌ಶಿವಕುಮಾರ್ ಇದ್ದಾಗಲೂ ಡಿನ್ನರ್ ನಡೆದಿದೆ, ಇಲ್ಲದಿದ್ದಾಗಲೂ ನಡೆದಿದೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅರ್ಥ ಇಲ್ಲ’ ಎಂದರು.

ಇನ್ನು ಉಡುಪಿಯಲ್ಲಿ ಮಾತನಾಡಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ನಾನು ಪಕ್ಷದ ಜೊತೆ ಇರುವವ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದೇನೆ, ನನ್ನ ಮುಖಂಡನನ್ನು ಸಮರ್ಥಿಸುವುದು ನನ್ನ ಜವಾಬ್ದಾರಿ ಎಂದರು.

ಹರಪನಹಳ್ಳಿಯಲ್ಲಿ ಮಾತನಾಡಿದ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ, 5 ವರ್ಷ ಸಿದ್ದುವೇ ಮುಖ್ಯಮಂತ್ರಿ ಆಗಿರುತ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಊಟಕ್ಕೆ ಸೇರುವುದು ತಪ್ಪಾ ಎಂದು ಪ್ರಶ್ನಿಸಿದರು.

ಗದಗದಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ಡಿನ್ನರ್‌ ಪಾರ್ಟಿ ನಡೆದರೂ, ನಡೆಯದಿದ್ದರೂ ಸಮಸ್ಯೆ ಇಲ್ಲ, ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಸುಭದ್ರವಾಗಿದೆ. ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದರು.

ದೇವದುರ್ಗದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌, ಸಿಎಂ ಸಿದ್ದರಾಮಯ್ಯ ಅವರನ್ನು ಯಾರೂ, ಏನೂ ಮಾಡಲು ಆಗುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೆವಾಲಾ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಪರವಾಗಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರುವ ತನಕ ಅವರನ್ನು ಯಾರೂ, ಏನೂ ಮಾಡಲು ಆಗಲ್ಲ ಎಂದರು.

ರಾಜ್ಯದಲ್ಲಿ ಶೇ.99ರಷ್ಟು ಕುರುಬ ಜನಾಂಗ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಜೊತೆಗೆ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ದಲಿತರ ಹಾಗೂ ಮೇಲ್ವರ್ಗದ ಬಡವರ ಅಭೂತ ಬೆಂಬಲವಿದ್ದು, ಇವರೆಲ್ಲರ ಕಲ್ಯಾಣಕ್ಕಾಗಿ ಅವರು ಆಶಾಕಿರಣದಂತೆ ಕಂಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಸಿದ್ದರಾಮಯ್ಯನವರು ನನ್ನ ಮನೆಗೂ ಊಟಕ್ಕೆ ಬಂದಿದ್ದಾರೆ. ಔತಣಕೂಟಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ. ಸಿದ್ದರಾಮಯ್ಯನವರ ಬದಲಾವಣೆ ಬಗ್ಗೆ ಚರ್ಚೆ ಎಲ್ಲೂ ನಡೆಯುತ್ತಿಲ್ಲ. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್‌ ಲಾಡ್‌, ಸಿದ್ದರಾಮಯ್ಯನವರು ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿಎಂ ಆಗಿ ಮುಂದುವರಿಯುತ್ತಾರೆ ಎಂದರು.

ಸಿದ್ದು ಪರ ಮತ್ತೆ ಅವರ ಆಪ್ತ ಸಚಿವರ ಬ್ಯಾಟಿಂಗ್‌

- ಸ್ಥಾನ ಅಬಾಧಿತ, ಅವರೇ ಸಿಎಂ ಆಗಿ ಮುಂದುವರಿಕೆ

- ಮಹದೇವಪ್ಪ, ಭೈರತಿ ಸುರೇಶ್‌, ರಾಜಣ್ಣ ಪುನರುಚ್ಚಾರ

ಸಿದ್ದು ಆಪ್ತರ ವಾದವೇನು?

- ಕಾಂಗ್ರೆಸ್‌ ಪಕ್ಷದ ಇಡೀ ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿದೆ

- ಸೋನಿಯಾ, ರಾಹುಲ್‌, ಸುರ್ಖೇವಾಲಾ ಸೇರಿ ಎಲ್ಲರೂ ಸಿದ್ದು ಪರ

- ಸಿದ್ದರಾಮಯ್ಯ ಅವರೇ ಪೂರ್ಣಾವಧಿಯ ಐದೂ ವರ್ಷ ಸಿಎಂ ಆಗಿರ್ತಾರೆ

- ರಾಜ್ಯದಲ್ಲಿ ಶೇ.99ರಷ್ಟು ಕುರುಬ ಜನಾಂಗ ಸಿದ್ದು ಪರ ಇದೆ

- ಅಲ್ಪಸಂಖ್ಯಾತರು, ಒಬಿಸಿ ದಲಿತರು, ಮೇಲ್ವರ್ಗವೂ ಸಿದ್ದು ಪರ

- ಅವರು ರಾಜ್ಯದ ಎಲ್ಲ ವರ್ಗಗಳ ಆಶಾಕಿರಣ, ಬದಲಾವಣೆ ಇಲ್ಲ

- ಪಕ್ಷದಲ್ಲಿನ ಡಿನ್ನರ್‌ ಮೀಟ್‌ಗಳಲ್ಲಿ ಸಿಎಂ ಬದಲಾವಣೆ ಚರ್ಚೆ ಅಗಿಲ್ಲ