ರಾಜೀನಾಮೆಗೆ ಮುಂದಾದ ಸಚಿವ, ಶಾಸಕರು

| Published : Mar 28 2024, 12:53 AM IST / Updated: Mar 28 2024, 07:52 AM IST

ಸಾರಾಂಶ

ಸಣ್ಣ ಪೆದ್ದಣ್ಣಗೆ ಟಿಕೆಟ್‌ ವಿರೋಧಿಸಿ ವಿಧಾನಪರಿಷತ್ ಸಭಾಪತಿ ಬಸವಾರಾಜ್ ಹೊರಟ್ಟಿರಿಗೆ ನಸೀರ್‌ ಅಹಮದ್ ಮತ್ತು ಎಂ.ಎಲ್.ಅನಿಲ್ ಕುಮಾರ್ ಅವರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಇದನ್ನು ತಿಳಿದ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ನೀಡದಂತೆ ಬ್ರೇಕ್ ಹಾಕಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಸಂಬಂಧವಾಗಿ ಭಿನ್ನಮತ ಸ್ಫೋಟಗೊಂಡಿದೆ, ಮೂರು ಮಂದಿ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬ ಸಚಿವರು ಸೇರಿದಂತೆ ೬ ಮಂದಿ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಲು ಮುಂದಾಗುವ ಮೂಲಕ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಿಸಿದೆ.

ಇದರಿಂದ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷಸ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಲೇ ಭಿನ್ನಮತದ ಸೂತ್ರದಾರ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಚಿವ ಸುಧಾಕರ್‌ರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ರಾಜೀನಾಮೆ ನೀಡುವುದಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು.

ರಾಜೀನಾಮೆಗೆ ಮುಂದಾದ ಸಚಿವ, ಶಾಸಕರು

ದೃಶ್ಯ ಮಾಧ್ಯಮಗಳ ಮೂಲಕ ಕೋಲಾರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಘೋಷಿಸಲು ಮುಂದಾಗಿದೆ, ಹಾಗಾಗಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್, ಸಚಿವ ಡಾ.ಎಂ.ಸಿ. ಸುಧಾಕರ್, ಶಾಸಕರಾದ ಕೊತ್ತೂರು ಮಂಜುನಾಥ್, ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ ಇವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಮಂಗಳೂರಿನಲ್ಲಿದ್ದ ಕಾರಣ ಅಲ್ಲಿಗೆ ತೆರಳಿ ರಾಜೀನಾಮೆ ಸಲ್ಲಿಸಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು.

ವಿಧಾನಪರಿಷತ್ ಅಧ್ಯಕ್ಷ ಬಸವಾರಾಜ್ ಹೊರಟ್ಟಿರಿಗೆ ನಸೀರ್‌ ಅಹಮದ್ ಮತ್ತು ಎಂ.ಎಲ್.ಅನಿಲ್ ಕುಮಾರ್ ಅವರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಈ ಸುದ್ದಿ ತಿಳಿದ ತಕ್ಷಣವೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜೀನಾಮೆ ನೀಡದಂತೆ ಬ್ರೇಕ್ ಹಾಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರಿಗೆ ಭಿನ್ನಮತಿಯರನ್ನು ಸಮಾಧಾನಪಡಿಸಲು ಸೂಚಿಸಿತಲ್ಲದೆ, ಕೋಲಾರದ ಟಿಕೆಟ್ ಘೋಷಣೆ ಮುಂದೂಡಿದೆ.

ಕಾಂಗ್ರೆಸ್‌ ಗೆಲ್ಲಿಸಲು ಒಗ್ಗಟ್ಟಾಗಿ

ಈ ಸಂಬಂಧವಾಗಿ ಕೆ.ಎಚ್.ಮುನಿಯಪ್ಪ ಕಳೆದ ಚುನಾವಣೆಯಲ್ಲಿ ನಡೆದ ಘಟನೆಯು ಮರುಕಳುಹಿಸುವುದು ಬೇಡ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಹಂಚಿಕೆ ಮಾಡಿದರೂ ಎಲ್ಲರೂ ಒಗ್ಗಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತಾಗಬೇಕು, ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತಕ್ಕೆ ಭದ್ರಬುನಾದಿ ಹಾಕಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇಂದು ಅಂತಿಮ ನಿರ್ಧಾರ

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗುರುವಾರ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅಧಿಕೃತವಾಗಿ ಘೋಷಿಸುವ ಮುಂಚೆ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಬಣದ ಜತೆ ಚರ್ಚಿಸಿ ರಾಜೀ ಸಂಧಾನ ನಡೆಸಿ ಒಮ್ಮತದ ಅಭ್ಯರ್ಥಿಗೆ ಟಿಕೆಟ್ ಹಂಚಿಕೆ ಮಾಡುವ ಸಾಧ್ಯತೆ ಇದೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಇದೇ ರೀತಿ ಭಿನ್ನಮತದಿಂದಾಗಿ ಗೆಲ್ಲುವ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಹೆಚ್. ಮುನಿಯಪ್ಪ ತಮ್ಮ ಪಕ್ಷದವರಿಂದಲೇ ಸೋಲನ್ನು ಅನುಭವಿಸಿದಂತೆ ಈ ಬಾರಿಯೂ ಕೆ.ಹೆಚ್. ಮುನಿಯಪ್ಪ ತಮ್ಮ ಅಳಿಯ ಚಿಕ್ಕ ಪೆದ್ದಣ್ಣರಿಗೆ ಟಿಕೆಟ್ ಕೊಡಿಸಲು ಮುಂದಾಗಿರುವುದನ್ನು ವಿರೋಧಿಸಿರುವ ಮಾಜಿ ಸ್ಫೀಕರ್ ಕೆ.ಆರ್. ರಮೇಶ ಕುಮಾರ್ ತಂಡವು ಭಿನ್ನಮತವನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವುದಲ್ಲದೆ ರಾಜೀನಾಮೆ ನೀಡಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಗೊಂದಲ ಸೃಷ್ಠಿಸಿದೆ.

ಬಲಗೈ ಸಮುದಾಯಕ್ಕೆ ಟಿಕೆಟ್‌ ನೀಡಲಿ

ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಣವು ಬಲಗೈ ಸಮುದಾಯದವರಿಗೆ ನೀಡಬೇಕೆಂಬ ಒತ್ತಾಯದ ಹಿನ್ನಲೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಪ್ಪ ಮತ್ತು ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಇಬ್ಬರು ಬಲಗೈ ಆಕಾಂಕ್ಷಿಗಳಾಗಿದ್ದು ಈಗಾಗಲೇ ಎಲ್.ಹನುಮಂತಪ್ಪರಿಗೆ ಎ.ಐ.ಸಿ.ಸಿ. ವರ್ಕಿಂಗ್ ಸಮಿತಿ ಸದಸ್ಯ ಸ್ಥಾನ ನೀಡಿರುವುದರಿಂದ ಸಿ.ಎಂ.ಮುನಿಯಪ್ಪರಿಗೆ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ಬಾಕ್ಸ್‌........ರಾಜೀನಾಮೆ ಪ್ರಹಸನ...ಸಚಿವ ಕೆ.ಎಚ್‌ಮುನಿಯಪ್ಪನವರ ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್‌ ನೀಡುವುದನ್ನು ವಿರೋಧಿಸಿ ಸಚಿವ ಡಾ.ಎಂ.ಸಿ.ಸುಧಾಕರ್‌, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಸೀರ್ ಅಹಮದ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಶಾಸಕರಾದ ಕೊತ್ತೂರು ಮಂಜುನಾಥ್, ನಂಜೇಗೌಡ, ಹಾಗೂ ಎಸ್.ಎನ್.ನಾರಾಯಣಸ್ವಾಮಿ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದು, ಹೈಕಮಾಂಡ್‌ ಸೂಚನೆಯಂತೆ ಸದ್ಯ ತಟಸ್ಥರಾಗಿದ್ದಾರೆ.