ವಾಲ್ಮೀಕಿ ಹಗರಣ ಸತ್ಯ, ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ : ಸಚಿವ ಎಂ.ಬಿ.ಪಾಟೀಲ್

| Published : Jul 21 2024, 01:17 AM IST / Updated: Jul 21 2024, 04:19 AM IST

MB Patil

ಸಾರಾಂಶ

ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿದೆ. ಆದರೆ, ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ. ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಯಾರೇ ಇರಲಿ ಶಿಕ್ಷೆ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ವಿಜಯಪುರ: ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿದೆ. ಆದರೆ, ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ. ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಯಾರೇ ಇರಲಿ ಶಿಕ್ಷೆ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಹಾಗೂ ಮುಡಾ ಹಗರಣದ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ. ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಎಸ್‌ಐಟಿ, ಇ.ಡಿ. ತನಿಖೆ ಮಾಡುತ್ತಿವೆ. ಇದರಲ್ಲಿ ಎಂಡಿ ಪಾತ್ರ ಮುಖ್ಯವಾಗಿದೆ. ಮಾಜಿ ಸಚಿವ ನಾಗೇಂದ್ರ ಮೇಲೆ ನೇರ ಆರೋಪ ಇಲ್ಲ. ಮೌಖಿಕ ಆದೇಶ ಅಂತ ಯಾರು ಬೇಕಾದರೂ ಆರೋಪ ಮಾಡಬಹುದು. ತನಿಖೆ ಬಳಿಕ ನಾಗೇಂದ್ರ ಪಾತ್ರ ಇದೆಯೋ ಇಲ್ಲವೋ ಗೊತ್ತಾಗುತ್ತದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಹಗರಣಗಳು ನಡೆದಿದ್ದು, ಅವುಗಳ ಕುರಿತು ತನಿಖೆ ನಡೆಸುತ್ತೇವೆ. ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮಾಡಿರುವ ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ. ಯತ್ನಾಳ್ ಬಳಿ ದಾಖಲೆಗಳಿದ್ದರೆ ಕೊಡಲಿ ಎಂದು ತಿಳಿಸಿದರು.