ಸಚಿವ ನಾಗೇಂದ್ರ ರಾಜೀನಾಮೆ ಕೇಳಿಲ್ಲ: ಸಿದ್ದರಾಮಯ್ಯ

| Published : Jun 04 2024, 10:04 AM IST

Siddaramaiah

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ರಾಜಿನಾಮೆಯನ್ನು ಕೇಳಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರೆ, ಅವರ ಸಂಪುಟದ ಕೆಲ ಸಚಿವರು ನಾಗೇಂದ್ರ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಬೆಂಗಳೂರು :  ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ರಾಜಿನಾಮೆಯನ್ನು ಕೇಳಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರೆ, ಅವರ ಸಂಪುಟದ ಕೆಲ ಸಚಿವರು ನಾಗೇಂದ್ರ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣ ಬೈರೇಗೌಡ ಅವರು ಬಿಜೆಪಿ ಆರೋಪ ಮಾಡಿದ ಮಾತ್ರಕ್ಕೆ ರಾಜೀನಾಮೆ ಸಾಧ್ಯವಿಲ್ಲ. ತನಿಖೆ ನಡೆದಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಜರುಗಲಿದೆ ಎಂದು ತಿಳಿಸಿದರು.

ಇನ್ನು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಯಾವ ಕ್ರಮಕೈಗೊಳ್ಳಬೇಕೆಂದು ಪರಿಶೀಲಿಸಲಾಗುವುದು ಎಂದ ಅವರು, ಬಿಜೆಪಿಯವರು ಆರೋಪಿಸಿದಂತೆ ನನಗೆ ಯಾರೂ ಯಾವ ಬೆದರಿಕೆಯನ್ನೂ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಎಂದು ಹೇಳಿದ್ದಾರೆ ಎಂಬುದು ಸತ್ಯ. ಆದರೆ ಯಾವ ಸಚಿವರು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು ಸಚಿವರು ಯಾರು ಎಂಬುದರ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿದೆ ಎಂದರು.

ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡೋದು, ಬಿಡೋದು ಅವರಿಗೆ ಬಿಟ್ಟ ವಿಚಾರ. ಯಾರಿಂದ ರಾಜೀನಾಮೆ ಪಡೆಯಬೇಕು, ಸಂಪುಟದಲ್ಲಿ ಯಾರಿರಬೇಕೆಂದು ನಿರ್ಧರಿಸುವುದು ಮುಖ್ಯಮಂತ್ರಿಯವರ ಪರಮಾಧಿಕಾರ. ಸಿಬಿಐ, ಎನ್‌ಐಎ ಬರುತ್ತದೆ ಎಂದು ಹೆದರಿ ರಾಜೀನಾಮೆ ಏಕೆ ಕೊಡಬೇಕು?. ಡಿವೈಎಸ್‌ಪಿ ಗಣೇಶ್‌, ಡಿ.ಕೆ.ರವಿ ಪ್ರಕರಣದಲ್ಲಿ ಅಂದಿನ ಗೃಹಸಚಿವ ಕೆ.ಜೆ.ಜಾರ್ಜ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಸಿಬಿಐಗೆ ಪ್ರಕರಣದ ತನಿಖೆ ವಹಿಸಲಾಗಿತ್ತು. ನೇರವಾಗಿಯೇ ಬಿಜೆಪಿಯವರು ಜಾರ್ಜ್‌ ಅವರ ಮೇಲೆ ಆರೋಪ ಮಾಡಿದ್ದರು. ಆ ನಂತರ ಏನಾಯ್ತು?. ಪ್ರಕರಣದಲ್ಲಿ ಯಾರಿಗೂ ರಕ್ಷಣೆ ಕೊಡುವ ಮಾತೇ ಇಲ್ಲ ಎಂದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಯಾರು ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಡೆತ್‌ನೋಟ್‌ನಲ್ಲಿ ಆರೋಪ ಮಾಡಿರುವುದು ನಿಜ. ಇಲ್ಲ ಎಂದು ಹೇಳುವುದಿಲ್ಲ. ಇಲಾಖೆ ಸಚಿವರಾದ ನಾಗೇಂದ್ರ ಅವರೊಂದಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮಾತನಾಡಿದ್ದು, ಹಗರಣದಲ್ಲಿ ನೂರಕ್ಕೆ ನೂರರಷ್ಟು ಭಾಗಿಯಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೂ ಡೆತ್‌ನೋಟ್‌ನಲ್ಲಿ ಸಚಿವರು ಎಂಬ ಉಲ್ಲೇಖ ಇರುವುದರಿಂದ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.