ಸಾರಾಂಶ
ಬೆಂಗಳೂರು : ಎಚ್‌ಎಂಟಿ ವಶದಲ್ಲಿರುವ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೇ ನಂ. 1 ಮತ್ತು 2ರಲ್ಲಿರುವ ಅರಣ್ಯ ಭೂಮಿ ಡಿ-ನೋಟಿಫಿಕೇಷನ್‌ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
2020ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸರ್ಕಾರಿ ಸಂಸ್ಥೆಗಳಿಗೆ ಅರಣ್ಯ ಭೂಮಿಯನ್ನು ಡಿ-ನೋಟಿಫಿಕೇಷನ್ ಮಾಡಿ ಮಂಜೂರು ಮಾಡುವ ಸಂಬಂಧ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು, ಸಚಿವ ಸಂಪುಟದ ನಿರ್ಧಾರಕ್ಕೆ ಸಲ್ಲಿಸಲು ಅರಣ್ಯ ಇಲಾಖೆಗೆ ಸೂಚಿಸಿದ್ದರು. ಆದರೆ, ಎಚ್‌ಎಂಟಿಗೆ ನೀಡಲಾಗಿರುವ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಸಚಿವ ಸಂಪುಟದ ಗಮನಕ್ಕೆ ತರದೆಯೇ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.
ಎಚ್‌ಎಂಟಿ ವಶದಲ್ಲಿರುವ ಭೂಮಿಯ ಪೈಕಿ ನೂರಾರು ಎಕರೆ ಭೂಮಿಯಲ್ಲಿ ಈಗಲೂ ದಟ್ಟ ಅರಣ್ಯವಿದೆ. ಆದರೆ, ಅಲ್ಲಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ವರದಿ ತಯಾರಿಸಿ ಡಿ-ನೋಟಿಫಿಕೇಷನ್‌ಗೆ ಅನುಮತಿ ಕೋರಿ ಕೆಲ ಉನ್ನತ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳು 2020ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದು ಕಾನೂನು ಬಾಹಿರವಾಗಿದ್ದುಸ, ಕೂಡಲೆ ಅರ್ಜಿ ಹಿಂಪಡೆಯಲು ತಿಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.