ಸಚಿವರ ಅವ್ಯವಹಾರ : ಸಿಎಂ ರಾಜೀನಾಮೆಗೆ ಒತ್ತಾಯ

| Published : May 28 2024, 01:14 AM IST / Updated: May 28 2024, 04:14 AM IST

ಸಾರಾಂಶ

ಶಾಸಕರು ಅಭಿವೃದ್ದಿಗೆ ಹಣ ಕೇಳಿದರೆ ಗ್ಯಾರಂಟಿಗಳಿಗೇ ಹಣ ಸಾಕಾಗುತ್ತಿಲ್ಲ, ಇನ್ನು ಅಭಿವೃದ್ದಿಗೆ ಎಲ್ಲಿಂದ ಹಣ ತರೋಣ ಎನ್ನುತ್ತಾರಂತೆ. ಶಾಸಕರು ಮುಖ್ಯ ಮಂತ್ರಿಗಳಿಗೆ ಮನವಿ ಮಾಡುವ ಅರ್ಜಿಗಳು ಕಸದ ಬುಟ್ಟಿ ಸೇರುತ್ತಿವೆ

 ಕೋಲಾರ : ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸಚಿವರ ಭ್ರಷ್ಟಚಾರದಿಂದಾಗಿ ಲೆಕ್ಕ ಪರಿಶೋಧಕ ಚಂದ್ರಶೇಖರ್ ಎಂಬುವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.

ನಗರದ ಸಿ.ಎಂ.ಆರ್ ಶ್ರೀನಾಥ್‌ರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ದಿನಗಳಿಂದ ರಾಜ್ಯದಲ್ಲಿ ಆಡಳಿತರೊಢ ಕಾಂಗ್ರೆಸ್ ಸರ್ಕಾರವನ್ನು ಲೂಟಿ ಸರ್ಕಾರ ಎಂದು ಟೀಕಿಸುತ್ತಿದ್ದವರಿಗೆ ಸಿದ್ದರಾಮಯ್ಯನವರು ದಾಖಲೆಗಳು ಕೇಳುತ್ತಿದ್ದರು, ಈಗ ಲೆಕ್ಕ ಪರಿಶೋಧಕ ಚಂದ್ರಶೇಖರ್ ಎಂಬುವರು ಸರ್ಕಾರದಲ್ಲಿ 87 ಕೋಟಿ ರೂ ಅವ್ಯವಹಾರಗಳು ನಡೆದಿದ್ದು, ಇದರಲ್ಲಿ ಅನೇಕ ಸಚಿವರು ಭಾಗಿಯಾಗಿರುವ ಬಗ್ಗೆ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ ಎಂದರು.

ಲೂಟಿ ಬ್ರ್ಯಾಂಡ್‌ ಸರ್ಕಾರ

ಆದರೆ ಸಚಿವರ ಹೆಸರುಗಳನ್ನು ನಮೂದಿಸದ ಕಾರಣ ಪೊಲೀಸರು ಸಚಿವರ ಮೇಲೆ ಎಫ್.ಐ.ಆರ್ ದಾಖಲು ಮಾಡಿಲ್ಲ ಎಂದಿದ್ದಾರೆ, ಕಾಂಗ್ರೆಸ್‌ ಸರ್ಕಾರ ಲೂಟಿ ಬ್ರ್ಯಾಂಡ್ ಸರ್ಕಾರ ಎನ್ನಲು ಇದಕ್ಕಿಂತ ಮತ್ತೊಂದು ದಾಖಲೆ ಬೇಕೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಮಹಿಳೆಯರ ಜೀವಕ್ಕೆ ಗ್ಯಾರಂಟಿ ಇಲ್ಲ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ, ಕೊಲೆ, ಸುಲಿಗೆ, ಅತ್ಯಾಚಾರ, ಕಳವು ಹೆಚ್ಚಾಗಿವೆ, ಮನೆಯಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಮನೆಗೆ ವಾಪಾಸ್ಸಾಗುತ್ತಾರೆ ಎಂಬ ನಂಬಿಕೆಯೇ ಇಲ್ಲವಾಗಿದೆ. ಮಹಿಳೆಯರ ಜೀವಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿಯೇ ಇಲ್ಲವಾಗಿದೆ, ಅಭಿವೃದ್ದಿ ಎಂಬುವುದು ಮನೆಗುದಿಗೆ ಬಿದ್ದಿದೆ. 

ಶಾಸಕರು ಅಭಿವೃದ್ದಿಗೆ ಹಣ ಕೇಳಿದರೆ ಗ್ಯಾರಂಟಿಗಳಿಗೇ ಹಣ ಸಾಕಾಗುತ್ತಿಲ್ಲ, ಇನ್ನು ಅಭಿವೃದ್ದಿಗೆ ಎಲ್ಲಿಂದ ಹಣ ತರೋಣ ಎನ್ನುತ್ತಾರಂತೆ. ಶಾಸಕರು ಮುಖ್ಯ ಮಂತ್ರಿಗಳಿಗೆ ಮನವಿ ಮಾಡುವ ಅರ್ಜಿಗಳು ಕಸದ ಬುಟ್ಟಿ ಸೇರುತ್ತಿವೆ ಎಂದು ದೂರಿದರು.ರಾಜ್ಯದ ರಾಜಧಾನಿಯಲ್ಲಿ ಕುಡಿಯಲು ನೀರಿಗೆ ಹಾಹಾಕಾರ ಇದೆ. 

ಬಂಡವಾಳ ಹೂಡಿಕೆದಾರರಿಗೆ ಬೆಂಗಳೂರು ಬೇಡ ಅಲ್ಲಿ ನೀರಿಲ್ಲ. ಕೇರಳಕ್ಕೆ ಬನ್ನಿ ಹೈದರಾಬಾದ್‌ಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರಂತೆ, ರಾಜ್ಯದಲ್ಲಿ ಹೊಡಿಕೆ ಮಾಡಿರುವ ಉದ್ಯಮಿಗಳು ಹೊಡಿಕೆ ಬಂಡವಾಳ ವಾಪಸ್ ಪಡೆಯುವ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಹೇಳಿದರು. 

ಭದ್ರತಾ ಸಂಸ್ಥೆಗೆ ಗುತ್ತಿಗೆ

ರಾಜ್ಯದಲ್ಲಿ ಹಾಲಿಗೆ ಪ್ರೋತ್ಸಾಹ ಹಣ ಕಳೆದ 7-8 ತಿಂಗಳಿಂದ ಸುಮಾರು ೮೦೦ ಕೋಟಿ ಹಣವನ್ನು ಹೈನು ಉತ್ಪಾದಕರಿಗೆ ನೀಡಿಲ್ಲ, ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳಿಗೆ ವೇತನ ನೀಡುತ್ತಿಲ್ಲ. ಬಿಬಿಎಂಪಿಯಲ್ಲಿ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಗುತ್ತಿಗೆಯನ್ನು ಭದ್ರತಾ ಸಂಸ್ಥೆಯೊಂದಕ್ಕೆ ನೀಡಿರುವುದು ಆಡಳಿತ ವ್ಯವಸ್ಥೆಗಳು ಹದಗೆಟ್ಟಿರುವುದಕ್ಕೆ ಭ್ರಷ್ಟಾಚಾರಕ್ಕೆ ಕೈಗನ್ನಡಿಯಂತೆ ಇದೆ ಎಂದು ದೂರಿದರು.

ಶಿಕ್ಷಕರ ಧನಿಯಾಗಿ ವೈಎಎನ್

ಹಿಂದಿನ ಬಿಜೆಪಿ ಸರ್ಕಾರವು ಶಿಕ್ಷಕರ ನೇಮಕಾತಿ, ವೇತನ ಹೆಚ್ಚಳ, ಬಡ್ತಿ ಸೇರಿದಂತೆ ಶಿಕ್ಷಕರ ಪರವಾದ ಧ್ವನಿಯಾಗಿ ಹಲವಾರು ಬೇಡಿಕೆಗಳನ್ನು ಈಡೇರಿಸಿದೆ ಇದಕ್ಕೆ ಮುಖ್ಯ ಕಾರಣ, ಕಳೆದ ಮೂರು ಭಾರಿಯಿಂದ ಆಯ್ಕೆ ಮಾಡಿದ್ದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಎಂಬುವುದನ್ನು ಶಿಕ್ಷಕರು ಗಮನಿಸಬಹುದಾಗಿದೆ ಎಂದರು. 

ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಮೂರು ಬಾರಿ ಸ್ಪರ್ಧಿಸಿ ಬಹಳ ಅಂತರದಲ್ಲಿ ಗೆಲುವು ಸಾಧಿಸಿದ್ದರು, ಅದೇ ರೀತಿ ಈ ಭಾರಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿ ಶಿಕ್ಷಕರ ಒತ್ತಾಯದ ಮೇರೆಗೆ ವೈ.ಎ.ನಾರಾಯಣಸ್ವಾಮಿರನ್ನು ಚುನಾವಣೆಯ ಕಣಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಈ ಬಾರಿ ಇನ್ನು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕರಾದ ವೈ.ಸಂಪಂಗಿ, ಕೆ.ಮಂಜುನಾಥ್‌ಗೌಡ, ವಿಧಾನ ಪರಿಷತ್ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಇದ್ದರು.