ಸಾರಾಂಶ
ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳoತಹ ಗೀಳಿಗೆ ಬೀಳದೆ ಅಧ್ಯಯನದಲ್ಲಿ ನಿರತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ಹಿರಿಯೂರು : ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳoತಹ ಗೀಳಿಗೆ ಬೀಳದೆ ಅಧ್ಯಯನದಲ್ಲಿ ನಿರತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ನಗರದ ತುಳಸಿ ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಕಾಡುಗೊಲ್ಲ ಸಂಘ ಹಾಗೂ ತಾಲೂಕು ಕಾಡುಗೊಲ್ಲ ಸಂಘದ ಸಂಯುಕ್ತಾಶ್ರಯದಲ್ಲಿ ಎಸ್ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಕಾಡುಗೊಲ್ಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಓದುವ ಸಮಯವನ್ನು ಓದುವುದಕ್ಕೆ ಮೀಸಲಿಡಿ. ಶಿಕ್ಷಣವನ್ನು ಹುಲಿಯ ಹಾಲಿಗೆ ಹೋಲಿಸಲಾಗುತ್ತದೆ. ಸಮಾಜ ನಿಮ್ಮ ಜ್ಞಾನಕ್ಕೆ ಮಾತ್ರ ಬೆಲೆ ಕೊಡುತ್ತದೆ. ಹಾಗಾಗಿ, ಶಿಕ್ಷಣಕ್ಕೆ ಎಲ್ಲರೂ ಮೊದಲ ಆದ್ಯತೆ ನೀಡಬೇಕು. ಕಾಡುಗೊಲ್ಲ ಸಮಾಜಕ್ಕೆ ಇನ್ನೂ ಹೆಚ್ಚಿನ ಶೈಕ್ಷಣಿಕ ಅವಕಾಶಗಳು ಸಿಗುವಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ ಮೂಲಕ ಪೋಷಕರಿಗೆ ಕೀರ್ತಿ ತರಬೇಕು ಎಂದರು.
ಹೊನಕಲ್ಲು ಪೀಠದ ಡಾ. ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಷ್ಟೇ ಅಧ್ಯಯನ ಮಾಡದೆ ಸಮಾಜದ ಆದರ್ಶ ನಾಗರೀಕರಾಗುವ ಗುಣ ಬೆಳೆಸಿಕೊಳ್ಳಬೇಕು. ಕೆಎಎಸ್, ಐಎಎಸ್ ನಂತಹ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು. ಉತ್ತಮ ಗುರಿಯನ್ನು ಹೊಂದಿದ್ದು, ನಿರಂತರ ಪ್ರಯತ್ನಪಟ್ಟರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.
ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ, ಸಮಾಜಕ್ಕೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ದೊರೆಯಬೇಕಿದೆ. ದಶಕಗಳಿಂದ ಮಾಡಿಕೊಂಡು ಬಂದಿರುವಂತಹ ಕಾಡುಗೊಲ್ಲ ಮೀಸಲಾತಿ ಹೋರಾಟ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಮಟ್ಟದ ನಾಯಕರುಗಳನ್ನು ಸಂಪರ್ಕಿಸಿದ್ದೇವೆ. ಆ ನಿಟ್ಟಿನಲ್ಲಿ ಅವರು ಭರವಸೆ ನೀಡಿದ್ದಾರೆ. ಹಿಂದುಳಿದಿರುವಂತಹ ಸಮಾಜ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕು. ಪ್ರಸ್ತಾವನೆ ಮಾಡಬೇಕೆಂದರು.
ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಮಾಡಬೇಕೆನ್ನುವ ವಿಷಯ ನಮ್ಮ ಮುಂದಿದೆ. ಸಮಾಜದಲ್ಲಿ ಇನ್ನೂ ಉಳಿದಿರುವಂತಹ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕುವ ಕೆಲಸವಾಗಬೇಕು. ಕಾಡುಗೊಲ್ಲ ಸಮಾಜದವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಾಡುಗೊಲ್ಲ ಸಮಾಜದ ಅಧ್ಯಕ್ಷ ಪಿ ಆರ್ ದಾಸ್, ಬಿಜೆಪಿ ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜನಿ, ವಕೀಲ ಬಿಡಿ ಬಸವರಾಜ್,ರೈತ ಮುಖಂಡ ಕೆಟಿ ತಿಪ್ಪೇಸ್ವಾಮಿ, ಗೀತಾನಂದಿನಿ ಗೌಡ,ಪಾಪಣ್ಣ, ತಿಪ್ಪೀರಯ್ಯ, ನಾಗರಾಜ್, ರಂಗಯ್ಯ, ಚಿತ್ತಪ್ಪ, ಧನಂಜಯ,ಗೋವಿಂದಪ್ಪ, ಆಲಮರದಟ್ಟಿ ರಂಗಯ್ಯ,ಅಭಿನಂದನ್, ಶಿವಣ್ಣ, ಹೇಮಂತ್ ಯಾದವ್, ಚಿತ್ರಜಿತ್ ಯಾದವ್, ನಾಗೇಂದ್ರಪ್ಪ, ಮೀನಾಕ್ಷಿ ನಂದೀಶ್, ಕೃಷ್ಣ ಪೂಜಾರಿ, ಜನಾರ್ದನ್ ಮುಂತಾದವರು ಉಪಸ್ಥಿತರಿದ್ದರು.