ಸಾರಾಂಶ
ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಎಂ.ಕೃಷ್ಣ ಅವರೊಂದಿಗೆ ತಮ್ಮ ಒಡನಾಟ, ಮೇರು ವ್ಯಕ್ತಿತ್ವದೊಂದಿಗಿನ ಸಾಹಚರ್ಯದ ಬಗ್ಗೆ ಹಿರಿಯ ಸಚಿವರು ಹಾಗೂ ಮತ್ತು ಶಾಸಕರು ಸದನದಲ್ಲಿ ಅನಾವರಣಗೊಳಿಸಿದ ರೀತಿಯಿದು.
ಸುವರ್ಣ ವಿಧಾನಸಭೆ : ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಎಂ.ಕೃಷ್ಣ ಅವರೊಂದಿಗೆ ತಮ್ಮ ಒಡನಾಟ, ಮೇರು ವ್ಯಕ್ತಿತ್ವದೊಂದಿಗಿನ ಸಾಹಚರ್ಯದಲ್ಲಿ ತಾವು ಕಲಿತ ಪಾಠಗಳು, ಆಡಳಿತ ವೈಖರಿ, ನಾಡಿನ ಅಭಿವೃದ್ಧಿಗೆ ಕೃಷ್ಣ ನೀಡಿದ ಕೊಡುಗೆ ಸೇರಿ ಅವರಿಂದ ತಮಗಾದ ನೆರವಿನ ಬಗ್ಗೆ ಹಿರಿಯ ಸಚಿವರು ಹಾಗೂ ಮತ್ತು ಶಾಸಕರು ಸದನದಲ್ಲಿ ಅನಾವರಣಗೊಳಿಸಿದ ರೀತಿಯಿದು.
ಮಲೆಮಹದೇಶ್ವರಕ್ಕೆ ಕಾಪ್ಟರ್ ಪ್ರಯಾಣ: ಪಾಟೀಲ್
ಕೃಷ್ಣ ಅವರ ಸಂಪುಟದಲ್ಲಿ 36 ಸಾವಿರ ಕೋಟಿ ರು.ಗಳ ಅನುದಾನ ಹೊಂದಿದ್ದ ಜಲಸಂಪನ್ಮೂಲ ಖಾತೆ ಸಚಿವನಾಗಿದ್ದ ನಾನು ಎಸ್.ಎಂ. ಕೃಷ್ಣ ಅವರೊಂದಿಗೆ ನಡೆಸಿದ ಆರ್ಥಿಕ ಚಟುವಟಿಕೆ ಎಂದರೆ ದೇವಸ್ಥಾನದ ಆರತಿ ತಟ್ಟೆಗೆ ಹಣ ನೀಡಲು ಮುಂದಾಗಿದ್ದು ಮಾತ್ರ.
ಹೀಗೆಂದು ಹೇಳಿದ್ದು ಸಚಿವ ಎಚ್.ಕೆ. ಪಾಟೀಲ್. ಸದನದಲ್ಲಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ಒಮ್ಮೆ ಮಹದೇಶ್ವರ ಬೆಟ್ಟಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದರು. ಆಗ ಅವರೇ ನೇರವಾಗಿ ನನ್ನ ಮನೆಗೆ ಕರೆ ಮಾಡಿ ತಮ್ಮೊಂದಿಗೆ ಬರುವಂತೆ ಸೂಚಿಸಿದ್ದರು. ಆದರೆ, ನಾನು ಅಂದು ಸಂಜೆ ವೇಳೆಗೆ ಊರಿಗೆ ತೆರಳಬೇಕಿತ್ತು. ಆದರೂ ಅವರು ಕರೆದ ಕಾರಣಕ್ಕಾಗಿ ನಾನು ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳಿದೆ. ಅಲ್ಲಿ ದೇವರ ದರ್ಶನ ಮಾಡಿ ಆರತಿ ಪಡೆಯುವಾಗ ಕಾಣಿಕೆ ಹಾಕಲು ಕೃಷ್ಣ ಅವರಿಗೆ ನಾನು ಹಣ ನೀಡಿದೆ. ಆದರೆ, ಅದನ್ನು ಪಡೆಯದ ಎಸ್.ಎಂ. ಕೃಷ್ಣ, ತಮ್ಮ ಜೇಬಿನಿಂದ ಹಣ ತೆಗೆದು ಕಾಣಿಕೆ ಹಾಕಿದರು.ಇದೊಂದೆ ನಾನು ಎಸ್‌ಎಂಕೆ ಅವರೊಂದಿಗೆ ನಡೆಸಿದ ಆರ್ಥಿಕ ವಹಿವಾಟು. ಸಾಮಾನ್ಯವಾಗಿ ಇಂತಹ ಹುದ್ದೆಯಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದವರಿಂದ ಹಲವು ರೀತಿಯ ಆರ್ಥಿಕ ಹೊಣೆಗಾರಿಕೆ ಹಾಗೂ ಸೂಚನೆಗಳು ಬರುತ್ತವೆ. ಆದರೆ, 36 ಸಾವಿರ ಕೋಟಿ ರು. ಅನುದಾನ ಹೊಂದಿದ್ದ ಖಾತೆ ನಿರ್ವಹಿಸುತ್ತಿದ್ದ ನನಗೆ ಇಂತಹ ಯಾವ ಸೂಚನೆಯನ್ನೂ ನೀಡಿರಲಿಲ್ಲ ಎಂದರು.
ಕೃಷ್ಣರಿಂದಲೇ ಶಾಸಕನಾದೆ: ಜಮೀರ್
ನಾನು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಲು ಎಸ್.ಎಂ. ಕೃಷ್ಣ ಅವರೇ ಕಾರಣ ಎಂಬುದನ್ನು ಸಚಿವ ಜಮೀರ್ ಅಹಮದ್ ಖಾನ್ ವಿವರಿಸಿದರು. 2004ರಲ್ಲಿ ಜಯನಗರದಲ್ಲಿ ಚುನಾವಣೆಗೆ ಸ್ಪರ್ಧಿಸಿ ರಾಮಲಿಂಗಾರೆಡ್ಡಿ ಅವರ ಎದುರು ಸ್ಪರ್ಧಿಸಿ ಸೋತಿದ್ದೆ. ಅದೇ ವೇಳೆ ಚಾಮರಾಜಪೇಟೆ ಶಾಸಕರಾಗಿದ್ದ ಎಸ್.ಎಂ. ಕೃಷ್ಣ ಅವರು ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.
ಹೀಗಾಗಿ ಅವರಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ನಾನು ಗೆದ್ದು ಶಾಸಕನಾದೆ. ಚುನಾವಣಾ ಫಲಿತಾಂಶದ ನಂತರ ಕೃಷ್ಣ ಅವರು ಕರೆ ಮಾಡಿ ನನಗೆ ಅಭಿನಂದನೆ ತಿಳಿಸಿದ್ದರು ಎಂದು ಸ್ಮರಿಸಿದರು. ಮತ್ತೊಂದು ಸಂದರ್ಭದಲ್ಲಿ, ಎಸ್.ಎಂ.ಕೃಷ್ಣ ಅವರ ಸರಳತೆ ಎಷ್ಟಿತ್ತೆಂದರೆ, ಚಾಮರಾಜಪೇಟೆಯಲ್ಲಿ ನಮ್ಮ ಕುಟುಂಬದ ಉದ್ಯಮವಾದ ನ್ಯಾಷನಲ್ ಟ್ರಾವೆಲ್ಸ್‌ನ ಟಿಕೆಟ್ ಬುಕ್ಕಿಂಗ್ ಕಚೇರಿ ಆರಂಭಿಸಿದ್ದೆವು. ಅದರ ಉದ್ಘಾಟನೆಗೆ ಅಂದು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ಕರೆದಿದ್ದೆ. ಕೇವಲ 200 ಚದರ ಅಡಿ ವಿಸ್ತೀರ್ಣದ ಕಚೇರಿ ಉದ್ಘಾಟಿಸಲು ನಾನು ನೀಡಿದ ಆಹ್ವಾನಕ್ಕೆ ಹಿಂದುಮುಂದು ನೋಡದೆ ಬಂದಿದ್ದರು. ಕಚೇರಿ ಉದ್ಘಾಟಿಸಿ ಸುಮಾರು 1 ಗಂಟೆಗೂ ಹೆಚ್ಚಿನ ಕಾಲ ಅಲ್ಲೇ ಕುಳಿತಿದ್ದರು ಎಂದರು.
ಕೃಷ್ಣ ಇಲ್ಲದಿದ್ದರೆ ಬದುಕುತ್ತಿರಲಿಲ್ಲ: ನರೇಂದ್ರಸ್ವಾಮಿ
ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ತಮಗಾದ ಅಪಘಾತ, ತಮ್ಮನ್ನು ಬದುಕಿಸಲು ಎಸ್.ಎಂ. ಕೃಷ್ಣ ಅವರು ಏರ್ ಆಂಬ್ಯುಲೆನ್ಸ್ ಮೂಲಕ ಕರೆತಂದಿದ್ದನ್ನು ಸ್ಮರಿಸಿದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನಗೆ ವಿಜಯಪುರದಲ್ಲಿ (ಹಿಂದಿನ ಬಿಜಾಪುರ) ಅಪಘಾತವಾಗಿತ್ತು. ಅದರಿಂದ ನನ್ನ ಬೆನ್ನಿನ ಮೂಳೆ ಮುರಿದು ಕೂರಲೂ ಸಾಧ್ಯವಾಗದಂತಾಗಿತ್ತು. ಆಗ ಎಸ್.ಎಂ. ಕೃಷ್ಣ ಅವರು ಏರ್ ಆಂಬ್ಯುಲೆನ್ಸ್ ಕಳುಹಿಸಿ ನನ್ನನ್ನು ನಿಮ್ಹಾನ್ಸ್‌ಗೆ ಕರೆತಂದರು. ನಂತರ ನನಗೆ ಶಸ್ತ್ರ ಚಿಕಿತ್ಸೆ ನಡೆದು ಬದುಕಿದೆ. ಎಸ್.ಎಂ. ಕೃಷ್ಣ ಅವರು ಇಲ್ಲದಿದ್ದರೆ ನಾನು ಬದುಕುತ್ತಲೇ ಇರುತ್ತಿರಲಿಲ್ಲ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.