ಸಾರಾಂಶ
ಮುಡಾ ತನಿಖೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕೆ.ಬಿ. ಕೋಳಿವಾಡ ಹೇಳಿಕೆಗೆ ಕಾಂಗ್ರೆಸ್ ನಾಯಕರು ಹಾಗೂ ಸಚಿವರ ತಿರುಗೇಟು
ಬೆಂಗಳೂರು : ಮುಡಾ ತನಿಖೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕೆ.ಬಿ. ಕೋಳಿವಾಡ ಹೇಳಿಕೆಗೆ ಕಾಂಗ್ರೆಸ್ ನಾಯಕರು ಹಾಗೂ ಸಚಿವರು ತಿರುಗೇಟು ನೀಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೋಳಿವಾಡ ಹೇಳಿಕೆಗೆ ಮಹತ್ವವಿಲ್ಲ. ಏಕೆಂದರೆ, ಅವರು ಶಿಸ್ತು ಸಮಿತಿಯ ಅಧ್ಯಕ್ಷರೇನಲ್ಲ ಎಂದು ಹೇಳಿದ್ದಾರೆ.
ವಿವಿಧ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಆಗಬಹುದಾದ ಮುಜುಗರವನ್ನು ತಪ್ಪಿಸಲು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಅವರು ನೀಡಿದ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಕೆಪಿಸಿಸಿ ಅಧ್ಯಕ್ಷ. ರೆಹಮಾನ್ ಖಾನ್ ಶಿಸ್ತು ಸಮಿತಿ ಅಧ್ಯಕ್ಷ. ಕೋಳಿವಾಡ ಅವರ ಹೇಳಿಕೆಗೆ ಯಾವುದೇ ಮಹತ್ವವಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನಾನೇ ಹೇಳುತ್ತಿದ್ದೇನೆ ಎಂದರು.
ಕೆ.ಬಿ.ಕೋಳಿವಾಡ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್ ಖಾನ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಅವರು ನಮ್ಮ ಕಾಂಗ್ರೆಸ್ ಪಕ್ಷದ ಹೈಕಮಾಂಡ್. ಅವರು ಹೇಳಿದರೆ ಮಾತ್ರ ತೂಕ ಇರುತ್ತದೆ. ಇವನ್ಯಾವನೋ ಹೇಳಿದರೆ ರಾಜೀನಾಮೆ ಕೊಡಲು ಆಗುತ್ತದೆಯೇ ಎಂದು ಕಿಡಿಕಾಡಿದರು.
ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕೋಳಿವಾಡ ಅವರ ವಯಸ್ಸೇನು? ಅವರು ಬೆಳಗ್ಗೆ ಹೇಳಿದ್ದು ಮಧ್ಯಾಹ್ನಕ್ಕೆ ಜ್ಞಾಪಕ ಇರುವುದಿಲ್ಲ. ಮಧ್ಯಾಹ್ನ ಹೇಳಿದ್ದು ರಾತ್ರಿಗೆ ಜ್ಞಾಪಕ ಇರುವುದಿಲ್ಲ. ಹೀಗಾಗಿ, ಅವರ ಹೇಳಿಕೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ರಾಜೀನಾಮೆ ಕೇಳಿರುವುದು ಕೋಳಿವಾಡ ಅವರ ವ್ಯಕ್ತಿಗತ ಅಭಿಪ್ರಾಯ. ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಅಲ್ಲ. ಶಾಸಕಾಂಗ, ಪಕ್ಷ, ಜನತೆ ಸೇರಿದಂತೆ ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ವಿವಿಧ ರಾಜ್ಯಗಳ ಚುನಾವಣೆಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕರಣ ಯಾವುದೇ ಪರಿಣಾಮ ಬೀರುವುದಿಲ್ಲ. ಕೋಳಿವಾಡ ಅವರು ಹಿರಿಯರಾಗಿದ್ದು, ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಮುಖ್ಯಮಂತ್ರಿಯವರ ಪರವಾಗಿ ರಾಜ್ಯ ಕಾಂಗ್ರೆಸ್‌ನ ಎಲ್ಲಾ ನಾಯಕರು, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂತಿದೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಸಂತೋಷ ಲಾಡ್ ಮಾತನಾಡಿ, ಕೋಳಿವಾಡ ಅವರು ಹಿರಿಯರಾಗಿದ್ದು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.