ಸಾರಾಂಶ
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾವಣೆ ಕುರಿತು ದೊಡ್ಡಮಟ್ಟದ ಚರ್ಚೆ, ಬಣಜಗಳ ನಡೆಯುತ್ತಿರುವ ಹೊತ್ತಿನಲ್ಲೇ, ಇದೀಗ ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧವೇ ಅಪಸ್ವರ ಕೇಳಿಬಂದಿದೆ.
ಸುರ್ಜೇವಾಲಾ ಪಕ್ಷಪಾತಿ ಧೋರಣೆ ತೋರಿಸುತ್ತಿದ್ದಾರೆ. ಹೀಗಾಗಿ ಅವರನ್ನು ವಾಪಸ್ ಕರೆಸಿಕೊಳ್ಳಲು ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ದೂರು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತ ಸಚಿವರು, ಶಾಸಕರು ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಡಿ.ಕೆ.ಶಿವಕುಮಾರ್ ವಿರೋಧಿ ಬಣದ ಸಿಟ್ಟು ಇದೀಗ ನೇರವಾಗಿ ಸುರ್ಜೇವಾಲಾ ಅವರ ಮೇಲೆ ತಿರುಗಿದಂತಾಗಿದೆ.
ಆರೋಪ ಏನು?:
ಸುರ್ಜೇವಾಲಾ ಅವರು ಎರಡೂ ಬಣಗಳನ್ನು ಸಮಾನವಾಗಿ ನೋಡದೆ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ. ಮುಖ್ಯವಾಗಿ ಹಾಸನದ ಸ್ವಾಭಿಮಾನ ಸಮಾವೇಶದ ಹೆಸರು ಬದಲಾಯಿಸಿದ್ದು, ದಲಿತ ಸಚಿವರ, ಶಾಸಕರ ಔತಣ ಕೂಟಕ್ಕೆ ಬ್ರೇಕ್ ಹಾಕಿದ್ದು ಹಾಗೂ ಬೆಳಗಾವಿಯಲ್ಲೇ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಜತೆ ಪ್ರತ್ಯೇಕ ಸಭೆ ನಡೆಸಿದ್ದ ಸುರ್ಜೇವಾಲಾ ವಿರುದ್ಧ ಸಿದ್ದರಾಮಯ್ಯ ಬಣದ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಸ್ತುವಾರಿ ಮೂಲಕ ಲಗಾಮು:ಡಿ.ಕೆ.ಶಿವಕುಮಾರ್ ಅವರು ಸುರ್ಜೇವಾಲಾ ಅವರ ಮೂಲಕ ನಮಗೆ ಲಗಾಮು ಹಾಕಿಸುತ್ತಿದ್ದಾರೆ. ಇದಕ್ಕೆ ಸುರ್ಜೇವಾಲಾ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಾಹುಲ್‌ಗಾಂಧಿ ಅವರೊಂದಿಗೆ ಮಾತನಾಡಿ ರಾಜ್ಯ ಉಸ್ತುವಾರಿ ವಾಪಸ್ ಕರೆಸಿಕೊಳ್ಳಲು ತಿಳಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಉಸ್ತುವಾರಿಯಾದವರು ಎರಡೂ ಬಣದ ಸಮಸ್ಯೆ ಆಲಿಸಬೇಕು. ರಾಜ್ಯದ ಪ್ರಮುಖ ಹಿರಿಯ ನಾಯಕರ ಸಭೆ ನಡೆಸಬೇಕಿತ್ತು. ಆದರೆ ಅವರು ಪ್ರತಿ ವಿಚಾರವನ್ನು ನೇರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ಗಾಂಧಿ ಗಮನಕ್ಕೆ ಕೊಂಡೊಯ್ಯುತ್ತಿದ್ದಾರೆ. ಇದರಲ್ಲೂ ಒಂದು ಬಣದ ಬಗ್ಗೆ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ. ಒಬ್ಬ ನಾಯಕನ ಪರ ನಿಂತಿರುವ ಸುರ್ಜೇವಾಲಾ ಅವರನ್ನು ವಾಪಸ್ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಅವರ ಬಳಿ ಆಪ್ತ ಮುಖಂಡರು ಪ್ರಸ್ತಾಪಿಸಿರುವುದಾಗಿ ತಿಳಿದುಬಂದಿದೆ.
ಸುರ್ಜೇವಾವ ವಿರುದ್ಧ ಆಕ್ಷೇಪ ಏನು?
- ಹಾಸನ ಸ್ವಾಭಿಮಾನ ಸಮಾವೇಶದ ಹೆಸರು ಬದಲಾಯಿಸಿದರು
- ದಲಿತ ಸಚಿವರು, ಶಾಸಕರ ಔತಣಕೂಟಕ್ಕೂ ಕಡಿವಾಣ ಹಾಕಿದರು
- ರಾಜ್ಯ ಉಸ್ತುವಾರಿ ಒಂದು ಬಣದ ಪರ ಪಕ್ಷಪಾತಿಯಾಗಿದ್ದಾರೆ
- ಅವರು ಉಸ್ತುವಾರಿಯಾಗಿ ಎರಡೂ ಬಣದ ಸಮಸ್ಯೆ ಆಲಿಸುತ್ತಿಲ್ಲ- ಕಾಂಗ್ರೆಸ್ ಉಸ್ತುವಾರಿ ಮೂಲಕ ಡಿಕೆಶಿಯಿಂದ ಇತರರಿಗೆ ಲಗಾಮು