ನನ್ನ, ಯತ್ನಾಳ್‌ ವಿರುದ್ಧ ಕ್ರಮಕ್ಕೆ ಧಮ್‌ ಬೇಕು : ಜೆಡಿಎಸ್‌, ಬಿಜೆಪಿ ವರಿಷ್ಠರಿಗೆ ಶಾಸಕ ಜಿಟಿಡಿ ನೇರ ಸವಾಲ್‌

| Published : Jan 23 2025, 11:14 AM IST

GT Devegowda

ಸಾರಾಂಶ

ಜೆಡಿಎಸ್‌ನಲ್ಲಿ ಬಂಡಾಯದ ಕಿಡಿ ಹಾರಿಸಿರುವ ಶಾಸಕ ಜಿ.ಟಿ.ದೇವೇಗೌಡ ಅವರು ನನ್ನ ಪಕ್ಷದಿಂದ ಉಚ್ಛಾಟಿಸಲು ತಾಕತ್ತು, ಧಮ್‌ ಬೇಕು ಎಂದು ಪಕ್ಷದ ಹಿರಿಯ ನಾಯಕರಿಗೆ ಸವಾಲು ಹಾಕಿದ್ದಾರೆ.

ಮೈಸೂರು : ಜೆಡಿಎಸ್‌ನಲ್ಲಿ ಬಂಡಾಯದ ಕಿಡಿ ಹಾರಿಸಿರುವ ಶಾಸಕ ಜಿ.ಟಿ.ದೇವೇಗೌಡ ಅವರು ನನ್ನ ಪಕ್ಷದಿಂದ ಉಚ್ಛಾಟಿಸಲು ತಾಕತ್ತು, ಧಮ್‌ ಬೇಕು ಎಂದು ಪಕ್ಷದ ಹಿರಿಯ ನಾಯಕರಿಗೆ ಸವಾಲು ಹಾಕಿದ್ದಾರೆ.

ಬುಧವಾರ ಸುದ್ದಿಗಾರರೊಡನೆ ಮಾತನಾಡಿ, ಬಿಜೆಪಿಯಲ್ಲಿ ಯತ್ನಾಳ್‌ ವಿರುದ್ಧ ಕ್ರಮ ಕೈಗೊಂಡಿಲ್ಲ. ನನ್ನ ಮೇಲಾಗಲಿ, ಯತ್ನಾಳ್‌ ಮೇಲಾಗಲಿ ಕ್ರಮ ಕೈಗೊಳ್ಳಲು ಪಕ್ಷದ ನಾಯಕರಿಗೆ ಧಮ್ ಬೇಕು. ನಾಯಕರಿಗೆ ತಾಕತ್ ಇಲ್ಲ ಎಂದರು.

ನನಗೆ ನನ್ನ ಮನೆ, ಕ್ಷೇತ್ರದ ಜವಾಬ್ದಾರಿ ಹೆಚ್ಚು ಇದೆ. ಇನ್ನೂ ಆರು ತಿಂಗಳು ಪಕ್ಷದ ಸಭೆಗಳಿಂದ ದೂರ ಇರುತ್ತೇನೆ. ನಮ್ಮ ನಾಯಕರಿಗೂ ಹೇಳಿದ್ದೇನೆ. ನಿಖಿಲ್ ಕುಮಾರಸ್ವಾಮಿ ಗೆ ಒಳ್ಳೆಯದಾಗಲಿ ಎಂದು ಹೇಳಿದರು.

ಸಿದ್ದರಾಮಯ್ಯ ಪರ ಬ್ಯಾಟ್

ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಯಾವ ನಾಯಕರ ಮೇಲೆ ಎಷ್ಟು ಎಫ್.ಐ.ಆರ್ ಗಳಿವೆ ಗೊತ್ತಾ? ಸಿದ್ದರಾಮಯ್ಯ ರಾಜೀನಾಮೆ ಯಾಕೆ ಕೊಡಬೇಕು. ನ್ಯಾಯಾಲಯದ ತೀರ್ಮಾನ ಬರಲಿ. ಆಮೇಲೆ ನೋಡೋಣ ಎಂದರು.

ತಮ್ಮ ಪಕ್ಷದಲ್ಲಿ ಯಾರ ಮೇಲೆ ಎಷ್ಟು ಎಫ್.ಐ.ಆರ್ ಗಳಿವೆ ಎಂಬುದನ್ನು ನಾಯಕರು ಮೊದಲು ನೋಡಿಕೊಂಡು ನಂತರ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲಿ ಎಂದೂ ಹೇಳಿದರು.

ಯತ್ನಾಳ್ ವಿರುದ್ಧ ವಾಗ್ದಾಳಿ

ಮುಡಾದ ಭ್ರಷ್ಟಾಚಾರದಲ್ಲಿ ತಮ್ಮ ಪಾತ್ರ ಇದೆ ಎಂಬ ಬಸವನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಿನಗೇನು ಗೊತ್ತು ನನ್ನ ಯೋಗ್ಯತೆ, ಆಸ್ತಿ, ಸಾಲದ ಲೆಕ್ಕ ಎಂದು ಜಿ.ಟಿ.ದೇವೇಗೌಡ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

ನಿನ್ನ ವಿಚಾರವೂ ನನಗೆ ಗೊತ್ತಿದೆ. ನಾನು ಬಹಿರಂಗಪಡಿಸುತ್ತೇನೆ. ನಾನು ಭ್ರಷ್ಟಾಚಾರ ಮಾಡಿರುವುದನ್ನು ನೀನು ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಜೊತೆ ಮಾತನಾಡಬೇಡ. ಇದು ನಾನು ನಿನಗೆ ಹಾಕುತ್ತಿರುವ ಸವಾಲು. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಕೆ ಇರಲಿ. ನೀನು ರಾಜಕೀಯಕ್ಕೆ ಬಂದಾಗ ಏನಿತ್ತು ನಂತರ ನೀನು ಹೇಗೆ ದುಂಡಗಾದೆ. ಸೌಹಾರ್ದ ಬ್ಯಾಂಕಿನ ಹೆಸರಿನಲ್ಲಿ ಎಷ್ಟು ಹಣ ಡಿಪಾಸಿಟ್ ಮಾಡಿಸಿಕೊಂಡು ಅದನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದೀಯ ಎಂಬುದು ನನಗೆ ಗೊತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಶಾಸಕರ ಮಾತಿಗೆ ಎಚ್ಡಿಕೆ ಬೆಲೆ ಕೊಡಲ್ಲ

ಎಚ್‌.ಡಿ.ಕುಮಾರಸ್ವಾಮಿ ಸುಮ್ಮನೆ ಎಲ್ಲರ ಅಭಿಪ್ರಾಯ ಕೇಳುತ್ತೇನೆ ಅಂತಾರೆ. ಆದರೆ ಏನೂ ಅಂದು ಕೊಂಡಿದ್ದಾರೋ ಅದನ್ನೇ ಮಾಡುವುದು. ಇಲ್ಲಿ ಶಾಸಕರ ಅಭಿಪ್ರಾಯಕ್ಕೆ ಬೆಲೆ ಇರುವುದಿಲ್ಲ.

-ಜಿ.ಟಿ.ದೇವೇಗೌಡ, ಜೆಡಿಎಸ್‌ ಶಾಸಕ.