ಮೋದಿ ಅಂದರೆ ಮೇಕರ್‌ ಆಫ್‌ ಡೆವಲಪ್ಡ್‌ ಇಂಡಿಯಾ: ಠಾಕೂರ್‌

| Published : Apr 05 2024, 01:47 AM IST / Updated: Apr 05 2024, 04:20 AM IST

ಮೋದಿ ಅಂದರೆ ಮೇಕರ್‌ ಆಫ್‌ ಡೆವಲಪ್ಡ್‌ ಇಂಡಿಯಾ: ಠಾಕೂರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಎಂದರೆ ‘ಮೇಕರ್ ಆಫ್ ಡೆವಲಪ್ಡ್ ಇಂಡಿಯಾ’ ಅಥವಾ ‘ಮಾಸ್ಟರ್ ಆಫ್ ಡಿಜಿಟಲ್ ಇನ್ಫಾರ್ಮೇಷನ್‌’ ಎಂಬುದಾಗಿ ಕರೆಯಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ವಿಶ್ಲೇಷಿಸಿದ್ದಾರೆ.

 ಬೆಂಗಳೂರು :  ಮೋದಿ ಎಂದರೆ ‘ಮೇಕರ್ ಆಫ್ ಡೆವಲಪ್ಡ್ ಇಂಡಿಯಾ’ ಅಥವಾ ‘ಮಾಸ್ಟರ್ ಆಫ್ ಡಿಜಿಟಲ್ ಇನ್ಫಾರ್ಮೇಷನ್‌’ ಎಂಬುದಾಗಿ ಕರೆಯಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ವಿಶ್ಲೇಷಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಐಟಿ ತಂತ್ರಜ್ಞರ ಜತೆ ಸಂವಾದದಲ್ಲಿ ಮಾತನಾಡಿದ ಅವರು, ಐಟಿ ಕುರಿತು ಮಾತನಾಡುವಾಗ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕುರಿತು ಮಾತನಾಡಬೇಕಾಗುತ್ತದೆ. ಸಾರ್ವಜನಿಕ ಮೂಲಸೌಕರ್ಯ, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ವರ್ಷ ₹10 ಲಕ್ಷ ಕೋಟಿ ವ್ಯಯಿಸಿದ್ದರೆ, ಈ ವರ್ಷ ₹11 ಲಕ್ಷ ಕೋಟಿಗಿಂತ ಹೆಚ್ಚು ವೆಚ್ಚ ಮಾಡುತ್ತಿದ್ದೇವೆ ಎಂದು ಹೇಳಿದರು.

10 ವರ್ಷಗಳ ಹಿಂದೆ ಭಾರತ ಮತ್ತು ಭಾರತೀಯರು ಕಾಂಗ್ರೆಸ್‌ ಮತ್ತು ಅದರ ಭಾಗೀದಾರ ಪಕ್ಷಗಳ ಭ್ರಷ್ಟಾಚಾರ ಹಗರಣಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಚಿಂತಿಸುವ ಸ್ಥಿತಿ ಇತ್ತು. ಯುಪಿಎ ಸರ್ಕಾರದ ಹಗರಣಗಳ ಬಗ್ಗೆ ಇಂದಿನ 18-22ರ ಹರೆಯದ ಯುವಜನರಿಗೆ ಅರಿವಿರಲಾರದು. 2009ರಿಂದ 2014ರ ನಡುವೆ ಒಂದಾದ ನಂತರ ಒಂದು ಹಗರಣಗಳು ನಡೆದವು. 2014ರಲ್ಲಿ ಅಭಿವೃದ್ಧಿ ಸ್ಥಗಿತವಾಗಿದ್ದು, ದೇಶದಲ್ಲಿ ಹಣದುಬ್ಬರ ಹೆಚ್ಚಾಗಿತ್ತು ಎಂದು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಹಗರಣಗಳು ನಡೆದಿರುವಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತ ಆರಂಭವಾಯಿತು. ಸ್ವಚ್ಛ, ಪ್ರಾಮಾಣಿಕ ಆಡಳಿತವನ್ನು ನೀಡುವುದಾಗಿ ತಿಳಿಸಲಾಯಿತು. ಅಂತೆಯೇ ಕಳೆದ 10 ವರ್ಷಗಳಲ್ಲಿ ಮೋದಿಯವರ ವಿರುದ್ಧ ಮತ್ತವರ ಸರ್ಕಾರದ ಒಬ್ಬರೇ ಒಬ್ಬ ಸಚಿವರ ವಿರುದ್ಧ ಒಂದು ಪೈಸೆಯ ಭ್ರಷ್ಟಾಚಾರದ ಆರೋಪಗಳಿಲ್ಲ. ಐಟಿ ಎಂದರೆ ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಲ್ಲ, ಅದನ್ನು ಇಂಡಿಯ ಟುಮಾರೊ (ಭವಿಷ್ಯದ ಭಾರತ) ಎಂದೂ ಅರ್ಥೈಸಬಹುದು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ವಿಕಸಿತ ಭಾರತದ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.

ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರೀ, ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ್‌ಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.