ಸಾರಾಂಶ
ಜೈಪುರ: ಕಾಂಗ್ರೆಸ್ ತಾನು ಆಡಳಿತದಲ್ಲಿದ್ದ ಸಮಯದಲ್ಲಿ ಮಾಡಿದ್ದ ಪಾಪಕೃತ್ಯಗಳಿಗೆ ರಾಷ್ಟ್ರದ ಜನತೆ ತಕ್ಕ ಶಿಕ್ಷೆ ನೀಡಿ ಪಾಠ ಕಲಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಅಲ್ಲದೆ, ಲೋಕಸಭೆಗೆ ಸ್ಪರ್ಧಿಸಲು ಧೈರ್ಯವಿಲ್ಲದೆ ರಾಜ್ಯಸಭೆಗೆ ಕೆಲವು ಕಾಂಗ್ರೆಸ್ಸಿಗರು ಆಯ್ಕೆ ಆಗಿದ್ದಾರೆ ಎಂದು ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಿದ ಸೋನಿಯಾ ಗಾಂಧಿ ಅವರನ್ನು ಕುಟುಕಿದ್ದಾರೆ.
ಭಾನುವಾರ ಜಾಲೋರ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಾ, ‘1984ರಲ್ಲಿ 400ಕ್ಕೂ ಅಧಿಕ ಸ್ಥಾನ ಗೆದ್ದ ಪಕ್ಷವು ಪ್ರಸ್ತುತ ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ ಸ್ಪರ್ಧಿಸಲೂ ಅಭ್ಯರ್ಥಿಗಳಿಲ್ಲದೇ ಪರದಾಡುತ್ತಿದೆ. ಅದಕ್ಕಾಗಿ ಇಂಡಿಯಾ ಎಂಬ ಹೆಸರಿನಲ್ಲಿ ಮಿತ್ರಪಕ್ಷಗಳ ಕೂಟವನ್ನು ರಚಿಸಿಕೊಂಡಿದೆ. ಆದರೆ ಚುನಾವಣೆಗೆ ಮುನ್ನವೇ ಇಂಡಿಯಾ ಕೂಟದ ರೆಕ್ಕೆಗಳು ಕಳಚಿಕೊಂಡಿದ್ದು ಶೇ.25 ಸ್ಥಾನಗಳಲ್ಲಿ ಅವರೇ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಈ ರೀತಿಯಾಗಿ ಕಾಂಗ್ರೆಸ್ ಪಕ್ಷವು ತಾನು ಆಡಳಿತದಲ್ಲಿದ್ದ ಸಮಯದಲ್ಲಿ ಮಾಡಿದ ಪಾಪಕೃತ್ಯಗಳಿಗೆ ಜನರು ತಕ್ಕ ಶಿಕ್ಷೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
ರಾಜಸ್ಥಾನದಿಂದ ರಾಜ್ಯಸಭೆಗೆ- ವ್ಯಂಗ್ಯ:
ಇದೇ ವೇಳೆ ಗಾಂಧಿ ಕುಟುಂಬದ ರಾಜ್ಯಸಭೆ ಪ್ರವೇಶಕ್ಕೆ ಟೀಕಿಸುತ್ತಾ, ‘ಲೋಕಸಭೆಯಲ್ಲಿ ಸ್ಪರ್ಧಿಸಲು ಧೈರ್ಯ ಇಲ್ಲದ ಕಾಂಗ್ರೆಸ್‌ನ ಧೀಮಂತ ನಾಯಕರು ರಾಜ್ಯಸಭೆಯಲ್ಲಿ ಸ್ಪರ್ಧಿಸಲು ರಾಜಸ್ಥಾನವನ್ನು ಕೇಂದ್ರ ಮಾಡಿಕೊಂಡಿದ್ದಾರೆ. ಮೊದಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. ನಂತರ ದಕ್ಷಿಣದ ಕೆ.ಸಿ. ವೇಣುಗೋಪಾಲ್‌ರನ್ನು ರಾಜ್ಯದಿಂದ ಮೇಲ್ಮನೆಗೆ ಕಳುಹಿಸಲಾಯಿತು. ಈಗ ಸೋನಿಯಾ ಸರದಿ. ಈ ಮೂಲಕ ಕಾಂಗ್ರೆಸ್ ಪಕ್ಷವು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವೆಂಬ ಗೆದ್ದಲಿನಲ್ಲಿ ಸಮಸ್ತ ರಾಷ್ಟ್ರವನ್ನು ಆಪೋಶನ ತೆಗೆದುಕೊಳ್ಳಲು ಹವಣಿಸುತ್ತಿದೆ. ಆದರೆ ರಾಜಸ್ಥಾನದ ಜನತೆ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿಸಿ ತಕ್ಕ ಪಾಠ ಕಲಿಸಿದ್ಧಾರೆ’ ಎಂದು ಆರೋಪಿಸಿದರು.
ರಾಜಸ್ಥಾನದ ಜಾಲೋರ್‌ನಲ್ಲಿ ಏ.26ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯ ಲಂಬಾರಾಂ ಚೌಧರಿ ಮತ್ತು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
;Resize=(128,128))
;Resize=(128,128))
;Resize=(128,128))
;Resize=(128,128))