ಮಂಗಲಸೂತ್ರದ ಬಗ್ಗೆ ಮಾತನಾಡುವ ಮೋದಿ, ರಾಜ್ಯದ ಈ ಅತಿದೊಡ್ಡ ಸೆಕ್ಸ್‌ ಹಗರಣದ ಬಗ್ಗೆ ಏನು ಹೇಳುತ್ತಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

 ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ‌ ಜತೆ ಇರುವ ವ್ಯಕ್ತಿ‌ ಇಂದು ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮೋದಿಯವರು ಅದೇ ವ್ಯಕ್ತಿಯ ಪರ ಮತಯಾಚಿಸಿದ್ದ‌ರು. ಅದೇ ವ್ಯಕ್ತಿ ಯಾರಿಗೂ ಗೊತ್ತಾಗದಂತೆ ಈಗ ವಿದೇಶಕ್ಕೆ ಪರಾರಿಯಾಗಿದ್ದಾನೆ. ಮಂಗಲಸೂತ್ರದ ಬಗ್ಗೆ ಮಾತನಾಡುವ ಮೋದಿ, ರಾಜ್ಯದ ಈ ಅತಿದೊಡ್ಡ ಸೆಕ್ಸ್‌ ಹಗರಣದ ಬಗ್ಗೆ ಏನು ಹೇಳುತ್ತಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಕಲಬುರಗಿ ಜಿಲ್ಲೆ ಸೇಡಂನಲ್ಲಿ ಸೋಮವಾರ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರ ಭಾಷಣ ಮಾಡಿದ ಪ್ರಿಯಾಂಕಾ, ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಸೆಕ್ಸ್‌ ಹಗರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಮೋದಿ‌ ಸುಮ್ಮನೆ ಇದ್ದರು. ಈಗ ಮೋದಿ‌ ಜತೆ ಇರುವ ವ್ಯಕ್ತಿ‌ ಇಂದು ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಯಾರಿಗೂ ಗೊತ್ತಾಗದಂತೆ ವಿದೇಶಕ್ಕೆ ಪರಾರಿಯಾಗಿದ್ದಾನೆ. ಅದೇ ವ್ಯಕ್ತಿಯ ಪರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತಯಾಚಿಸಿದ್ದರು. ಮಂಗಲಸೂತ್ರದ ಬಗ್ಗೆ ಮಾತನಾಡುವ ಮೋದಿ ಈಗ ಏನು ಹೇಳುತ್ತಾರೆ? ಮೋದಿಯವರು ಮಹಿಳೆಯರ ರಕ್ಷಣೆಗೆ ಏನು‌ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಹೇಳಲಿ. ರಾಜ್ಯದ ಜನ ಈ ಬಗ್ಗೆ ಮೋದಿಯವರನ್ನು ಪ್ರಶ್ನಿಸಬೇಕು. ಸುಮ್ಮನಿದ್ದರೆ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ‌ ಮೋದಿ ಮತ್ತೆ ಮತ ಕೇಳಲು ಬರುತ್ತಾರೆ ಎಂದು ಎಚ್ಚರಿಸಿದರು.