ಸಾರಾಂಶ
ಬೆಂಗಳೂರು : ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ನಿವಾರಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಬಾರಿ ಮನವಿ ಸಲ್ಲಿಸುವುದು. ಒಂದು ವೇಳೆ ಅನುದಾನ ನೀಡದಿದ್ದರೆ ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೆಸರಿನಲ್ಲಿ ಹೋರಾಟ ಮಾಡಲು ವಿವಿಧ ಸಂಘಟನೆಗಳು ನಿರ್ಣಯಿಸಿವೆ.
ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ ನೇತೃತ್ವದಲ್ಲಿ ಭಾನುವಾರ ಜಯನಗರ ಕ್ಷೇತ್ರದ 70ಕ್ಕೂ ಹೆಚ್ಚು ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಜೆಸಿಸಿಎ ಕ್ಲಬ್‌ನಲ್ಲಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡರು.
ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು, ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 27 ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹10 ಕೋಟಿ ಅನುದಾನ ನೀಡಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಿಲ್ಲ. ಈ ಬಗ್ಗೆ ಮುಂಬರುವ ಬುಧವಾರ ಅಥವಾ ಗುರುವಾರ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಕೆ ಮಾಡಬೇಕು. ಮಳೆಯಿಂದ ಸಾಕಷ್ಟು ರಸ್ತೆಗಳು ಹಾಳಾಗಿವೆ. ಜತೆಗೆ, ಸಾರ್ವಜನಿಕ ಆಸ್ತಿಗೂ ಹಾನಿ ಉಂಟಾಗಿದೆ. ಈ ಅಂಶಗಳನ್ನು ಪರಿಗಣಿಸಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು. ಆಗಲೂ ಅನುದಾನ ಬಿಡುಗಡೆ ಮಾಡದಿದ್ದರೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ತಾರಾ ಅನುರಾಧಾ, ಬಿಬಿಎಂಪಿ ಮಾಜಿ ಸದಸ್ಯರು ಇದ್ದರು.